ನರೇಗಾ ನಾಮಫಲಕ ಕಿತ್ತಿದ್ದಕ್ಕೆ ವೃದ್ಧನ ಕೊಲೆ

istockphoto-461995021-612x612
Published on

ಕೊಲೆಗಾರ ಪರಾರಿ, ಇಬ್ಬರು ಆರೋಪಿಗಳ ಬಂಧನ

ಚೇಳೂರು: ಜಮೀನಿನ ಪಕ್ಕದ ಕಾಲುವೆಗೆ ಕಲ್ಲು ಅಳವಡಿಸಲು ನಿರ್ಮಿಸಲಾದ ಮ-ನರೇಗಾ ಕಲ್ಲು ತೆರವುಗೊಳಿಸಿದ್ದಕ್ಕೆ ವೃದ್ಧನನ್ನು ಕೊಲೆಮಾಡಲಾಗಿದೆ.

ಮಾಬುಸಾಬ್ (75) ಕೊಲೆಯಾದವ. ಜಿ.ಆರ್.ವೆಂಕಟೇಶ್(35) ಕೊಲೆ ಆರೋಪಿ.

ಗ್ರಾಮದ ಮಾಬುಸಾಬ್ ಮತ್ತು ಕನುಮುಕಲ ವೆಂಕಟರವಣಪ್ಪ ಅವರ ಜಮೀನು ಅಕ್ಕಪಕ್ಕದಲ್ಲಿದ್ದು, ಜಮೀನುಗಳ ಮಧ್ಯದಲ್ಲಿ ಹಳ್ಳಕ್ಕೆ ಮ-ನರೇಗಾ ಯೋಜನೆಯಡಿ ಕಲ್ಲು ಅಳವಡಿಕೆ ಸಂಬಂಧ ರಾಶ್ಚೇರುವು ಗ್ರಾಮ ಪಂಚಾಯಿತಿಯಿಂದ ಭಾನುವಾರ ಜಮೀನಿನಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಹೇಳದೆ ಕೇಳದೆ ಜಮೀನಿನಲ್ಲಿ ನಾಮಲಕ ಹಾಕಲಾಗಿದೆ ಎಂದು ತಕರಾರು ತಗೆದ ಮಾಬುಸಾಬ್ ಪುತ್ರ ಸುಭಾಹಾನ್ ನಾಮಫಲಕಕ್ಕೆ ಹಾನಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಜಿ.ಆರ್.ವೆಂಕಟೇಶ್ ಗಲಾಟೆ ಮಾಡಿದ್ದ. ಸಂಜೆ ವೇಳೆ ಆಟೋದಲ್ಲಿ ಹೋಗುತ್ತಿದ್ದ ಸುಭಾಹಾನ್‌ನನ್ನು ತಡೆದು, ಆಟೋ ಧ್ವಂಸ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಮನೆ ಮುಂದೆ ನಿಂತಿದ್ದ ಮಾಬುಸಾಬ್ ಮೇಲೆ ಏಕಾಏಕಿ ಹಲ್ಲೇ ನಡೆಸಿ, ಇಟ್ಟಿಗೆಯಿಂದ ಹಣೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಘಟನೆ ಬಳಿಕ ವೆಂಕಟೇಶ್ ಪರಾರಿಯಾಗಿದ್ದಾನೆ. ಜಿ.ಆರ್.ವೆಂಕಟೇಶ್ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ರಶೀದ್, ಮಾಬಾಷಾ ವಿರುದ್ಧ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಶೀದ್, ಮಾಬಾಷಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕಾರಿಗಳ ಭೇಟಿ, ಪರಿಶೀಲನೆ

ಘಟನಾ ಸ್ಥಳಕ್ಕೆ ಸೋಮವಾರ ಸಂಜೆ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ರಾಜಾ ಇಮಾಂಖಾಸಿಂ. ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಜನಾರ್ದನ್, ನಯಾಜ್ ಬೇಗ್ ಭೇಟಿ ನೀಡಿ ಪರಿಶೀಲೀಸಿದರು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಪಿಎಸ್‌ಐ ಸೇರಿ ಪೊಲೀಸ್ ಮೀಸಲು ಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net