ಕೂಲಿಕಾರ್ಮಿಕರಿಗೆ ವರದಾನವಾಗದ ನರೇಗಾ

28 RMN-MGD P3
Published on

* ಜೆಸಿಬಿಯಿಂದ ಕಾಮಗಾರಿ ಮಾಡಿಸಿ ಕೋಟ್ಯಂತರ ರೂ. ಲೂಟಿ

* ಭ್ರಷ್ಟರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಉದ್ಯೋಗ ಖಾತ್ರಿ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಗ್ರಾಮೀಣ ಜನರು ಕೆಲಸ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಅನುಷ್ಠಾನಗೊಳಿಸಿದೆ. ಆದರೆ, ಈ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪುವ ಬದಲು ಉಳ್ಳವರ ಪಾಲಾಗುತ್ತಿದೆ.

ತಾಲೂಕಿನ ಕೆಲ ಗ್ರಾಪಂಗಳಲ್ಲಿ ಸದಸ್ಯರೇ ಅವರಿಗೆ ಬೇಕಾದವರಿಗೆ ಜಾಬ್‌ಕಾರ್ಡ್ ವಿತರಿಸಿ, ಬೇರೆಯವರ ಹೆಸರಿನಲ್ಲಿ ಜೆಸಿಬಿಯಿಂದ ಕಾಮಗಾರಿ ಮಾಡಿಸಿ ಕೋಟ್ಯಂತರ ರೂ. ಲೂಟಿ ಮಾಡುತ್ತಿದ್ದಾರೆ. ನೆಪಮಾತ್ರಕ್ಕೆ ನರೇಗಾದಲ್ಲಿ ಕಾಮಗಾರಿ ಮಾಡಿದರೂ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದಾಗಿ ಯೋಜನೆಯ ಮೂಲ ಉದ್ದೇಶವೇ ಬುಡಮೇಲಾದಂತಾಗಿದೆ.

ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವುದು, ಕೆರೆ ಕಟ್ಟೆಗಳ ರಕ್ಷಣೆ ಸೇರಿ ಸಾಮೂಹಿಕ ಸಂಪನ್ಮೂಲಗಳ ರಕ್ಷಣೆಗೆ ನರೇಗಾ ಯೋಜನೆ ವರದಾನವಾಗಬೇಕಿತ್ತು. ಗ್ರಾಪಂ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಗ್ರಾಮೀಣ ಅಭಿವೃದ್ಧಿ ಚಿತ್ರಣ ಬದಲಾಗುತ್ತಿತ್ತು. ಆದರೆ, ದುರುಪಯೋಗವೇ ಹೆಚ್ಚಾಗಿ, ಭ್ರಷ್ಟರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ ಎಂಬ ಮಾತು ಕೇಳಿಬರುತ್ತಿವೆ. ಯೋಜನೆಗೆ ಪ್ರತಿವರ್ಷ ಸರ್ಕಾರ 30 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಖರ್ಚುಮಾಡಿ ಅಭಿವೃದ್ಧಿಯ ಭಾರತ ನಿರ್ಮಾಣದ ಸಂಕಲ್ಪಕ್ಕೆ ಮುಂದಾದರೂ ಕೆಲವರ ಕುತಂತ್ರದಿಂದ ಮಹತ್ವಾಕಾಂಕ್ಷಿ ಯೋಜನೆ ಪ್ರಯೋಜನಕ್ಕೆ ಬಾರದಂತಾಗಿದೆ ಎಂಬುದು ನಾಗರಿಕರ ಆರೋಪ.

ಪಾರದರ್ಶಕತೆ ಇಲ್ಲ ?

ಸತ್ತವರ ಹೆಸರಿನಲ್ಲಿ ಎನ್.ಎಂ.ಆರ್. (ಹಾಜರಾತಿ) ಸೃಷ್ಟಿಸುವ ಗ್ರಾಪಂ ಸದಸ್ಯರು, ವಾಟರ್‌ಮನ್‌ಗಳು ಹಾಗೂ ಬೇಕಾದವರ ಬ್ಯಾಂಕ್ ಖಾತೆಗೆ ಹಣ ಹಾಕಿ, ಬಳಿಕ 500 ರೂ. ಅಥವಾ ಒಂದು ಸಾವಿರ ಕೊಟ್ಟು ಹಣ ಡ್ರಾ ಮಾಡಿಕೊಳ್ಳುವ ಉದಾಹರಣೆಗಳು ಸಾಕಷ್ಟಿವೆ.

ಯಂತ್ರೋಪಕರಣ ಬಳಸಿ ಕಾಮಗಾರಿ ಮಾಡಿರುವುದು, ಮರಣ ಹೊಂದಿರುವವರ ಹೆಸರಿನಲ್ಲಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅನುದಾನಿತ ಶಿಕ್ಷಕರ ಹೆಸರಿನಲ್ಲಿ ಜಾಬ್‌ಕಾರ್ಡ್‌ಗಳಿದ್ದು, ಅವರ ಹೆಸರಿಗೆ ಹಣ ಸಂದಾಯವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಬದು ನಿರ್ಮಾಣ, ಶೌಚಗೃಹ, ಕೃಷಿ ಹೊಂಡ ಕಾಮಗಾರಿಗಳನ್ನು ಮಾಡಿ ಬಿಲ್ ಪಡೆದು ನಂತರ ಆ ಕಾಮಗಾರಿಗಳನ್ನು ಮುಚ್ಚಿರುವ ನಿದರ್ಶನಗಳು ಕಂಡು ಬಂದಿವೆ. ಇದರಿಂದ ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ.

ಮಾಡದ ಕಾಮಗಾರಿಗೂ ಹಣ

ತಾಲೂಕಿನ ಕೆಲವೆಡೆ ಕೆರೆಗಳಲ್ಲಿ ಹೂಳು ತೆಗೆಯುವುದು, ಜಲ್ಲಿ ರಸ್ತೆ ನಿರ್ಮಾಣ, ರಾಜಕಾಲುವೆಗಳ ಸ್ವಚ್ಛತೆ ಮತ್ತು ತಡೆಗೋಡೆ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ಕೆರೆಯಂಗಳದಲ್ಲಿ ಸಸಿ ನೆಡುವುದು, ಗೋಕುಂಟೆ ನಿರ್ಮಾಣ, ಹೊಲಗಳಲ್ಲಿ ಬದು ನಿರ್ಮಾಣ, ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣದಂತಹ ಯಾವುದೇ ಕಾಮಗಾರಿ ಮಾಡದೆ ನಕಲಿ ಜಿಪಿಎಸ್ ಫೋಟೋಗಳನ್ನು ನೀಡಿ ಹಣವನ್ನು ಲಪಟಾಯಿಸಿರುವ ಆರೋಪಗಳು ಇವೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣಕುರುಡಂತೆ ವರ್ತಿಸುತ್ತಿದ್ದಾರೆ ಎಂಬ ಕೂಗು ಕೇಳಿಬಂದಿದೆ.

ಯಂತ್ರೋಪಕರಣ ಬಳಕೆ

ಜೆಸಿಬಿ ಬಳಸಿ ಕೆಲಸ ಮಾಡಿದರೂ ಕಾರ್ಮಿಕರಿಂದ ಕೆಲಸ ಮಾಡಿಸಿ ಕೂಲಿ ಹಣ ಪಾವತಿಸಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ನಾಮ್‌ಕೇವಾಸ್ಥೆಗೆ ಕಾಮಗಾರಿ ಸ್ಥಳದಲ್ಲಿ ಕೆಲವರನ್ನು ನಿಲ್ಲಿಸಿ ಕೈಗೆ ಉಪಕರಣ ಕೊಟ್ಟು ಫೋಟೋ ತೆಗೆಸಿ ದಾಖಲೆ ಜತೆ ಸೇರಿಸಲಾಗಿದೆ. ಅಲ್ಲದೇ, ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಅಳವಡಿಸಿ ಜಿಪಿಎಸ್ ಮಾಡಲಾಗಿದೆ. ಒಂದು ವೇಳೆ ಈ ಅಕ್ರಮವನ್ನು ಸ್ಥಳೀಯರು ವಿರೋಧಿಸಿದರೆ, ಕಾಮಗಾರಿಯ ಫಲಕಗಳನ್ನೇ ನಾಶಪಡಿಸಿ ಬಿಲ್ ಪಾವತಿಸಿಲ್ಲ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆರೋಪವೂ ಇದೆ.

ಕಾರ್ಮಿಕರರಿಗೆ ವಂಚನೆ

ಎನ್‌ಎಂಆರ್ ಸರಿಯಾಗಿ ದಾಖಲಿಸದೆ ಇರುವುದು, ಕೂಲಿ ಕಾರ್ಮಿಕರ ನಕಲಿ ಸಹಿ ಮತ್ತು ಹೆಬ್ಬೆಟ್ಟು ತಾಳೆಯಾಗದೆ ಇರುವುದು, ಬ್ಯಾಂಕ್ ಖಾತೆ ಲೆಕ್ಕದ ಮೋಸ, ಕಾಮಗಾರಿಗಳನ್ನು ಗುತ್ತಿಗೆ ನೀಡಿರುವುದು, ಮಾನವರ ಬದಲು ಯಂತ್ರಗಳ ಬಳಕೆ, ಸಾಮಗ್ರಿಗಳ ಬಿಲ್ ಪಾವತಿಯಲ್ಲಿ ನಿಯಮ ಉಲ್ಲಂಘನೆ, ಎರಡು ಎಕರೆ ಬದು ನಿರ್ಮಾಣ ಮಾಡಿ 4 ಎಕರೆ ಮಾಡಲಾಗಿದೆ ಎಂದು ಬಿಲ್ಲುಪಡೆಯಲಾಗಿದೆ. ಹಳೇ ಕಾಮಗಾರಿಗಳನ್ನೇ ಹೊಸ ಕಾಮಗಾರಿಗಳೆಂದು ತೋರಿಸಿರುವುದು ಹೀಗೆ ಹಲವು ಗ್ರಾಪಂ ಅಧಿಕಾರಿಗಳು ಹಾಗೂ ರಾಜಕೀಯದ ಬಲಾಢ್ಯರು ಶಾಮೀಲಾಗಿ ಯಂತ್ರೋಪಕರಣಗಳಿಂದ ಕಾಮಗಾರಿ ಮಾಡಿ ಕೂಲಿ ಕಾರ್ಮಿಕರನ್ನು ವಂಚಿಸಿದ್ದಾರೆ. ಕೂಲಿ ಕಾರ್ಮಿಕರ ಕೈಸೇರುವ ಬದಲು ಸದಸ್ಯರು ಹಾಗೂ ಅಧಿಕಾರಿಗಳ ಜೇಬಿಗೆ ಹಣ ಸೇರುತ್ತಿದೆ.

ಕಾಯಕ ಮಿತ್ರರಿಲ್ಲ

ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳುವ ಸಮುದಾಯ ಕಾಮಗಾರಿಗಳು ಅಥವಾ ಗ್ರಾಪಂ ಸಭೆಗಳಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಜಾಬ್‌ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರನ್ನು ನಿಯೋಜಿಸಬೇಕು. ಆ ಪ್ರಕಾರ ಕಾಮಗಾರಿ ನಿರ್ವಹಣೆ ಮತ್ತು ಉಸ್ತುವಾರಿಗೆ ಕಾಯಕ ಮಿತ್ರರನ್ನು ನೇಮಿಸಿಕೊಳ್ಳಬಹುದು. ಆದರೆ, ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಕಾಯಕ ಮಿತ್ರರನ್ನು ನೇಮಿಸಿಕೊಳ್ಳದೆ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿಯೇ ನರೇಗಾ ಕಾಮಗಾರಿ ಉಸ್ತುವಾರಿ ವಹಿಸಿಕೊಂಡು ಯಂತ್ರೋಪಕರಣಗಳಿಂದ ಕೆಲಸ ಮಾಡಿಸಿದ ಬಳಿಕ ಜಾಬ್ ಕಾರ್ಡ್‌ದಾರರಿಂದ ಕೂಲಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಕಾಮಗಾರಿಗಳಿಗೆ ಜಿಎಸ್‌ಟಿ ಹಣ ಪಾವತಿಸದೆ ಬಿಲ್ಲು ಪಡೆದು ಸರಕಾರದ ಬೊಕ್ಕಸಕ್ಕೆ ಮೋಸಮಾಡಿರುವ ಉದಾಹರಣೆಗಳಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಪಿಡಿಒ ಗಮನಕ್ಕೆ ತಂದರೂ ಜಿಎಸ್‌ಟಿ ಹಣ ಪಾವತಿಸದೆ ಮೋಸವೆಸಗಿದ್ದಾರೆ.

ನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಜೆಸಿಬಿ ಮೂಲಕ ಕಾಮಗಾರಿ ಮಾಡುತ್ತಿದ್ದಾರೆಂಬ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮವಹಿಸುತ್ತೇನೆ.ಚಂದ್ರು, ತಾಲೂಕು ಪಂಚಾಯಿತಿ ಇಒನರೇಗಾ ಯೋಜನೆ ಸಮರ್ಪಕವಾಗಿ ನಡೆಯದೆ ದುರುಪಯೋಗವಾಗಿದೆ. ಬಹುತೇಕ ಕಡೆ ಜೆಸಿಬಿ ಮೂಲಕ ಕಾಮಗಾರಿ ನಡೆಸಿ ಬಿಲ್ಲುಪಡೆಯಲಾಗಿದೆ. ಈ ಬಗ್ಗೆ ಇಒ, ಸಿಇಒ, ಎಡಿ ಅವರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.ಹೆಸರು ಹೇಳಲು ಇಚ್ಛಿಸದ ಗ್ರಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net