

ವಿಜಯವಾಣಿ ಸುದ್ದಿಜಾಲ ಕಾರವಾರ
ಮಾದಕ ವಸ್ತುಗಳ ಜಾಲದ ಮೇಲೆ ಬಲೆ ಬೀಸಿರುವ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕಳೆದ 24 ಗಂಟೆಯಲ್ಲಿ 8 ಜನರನ್ನು ಬಂಧಿಸಿದ್ದು, 50 ಸಾವಿರ ರೂ. ಮೌಲ್ಯದ 860 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಶಿರಸಿ,ಕುಮಟಾ, ಮುಂಡಗೋಡ, ದಾಂಡೇಲಿಯಲ್ಲಿ ಕಾರ್ಯಾಚರಣೆ ನಡೆದಿದೆ.
ಶಿರಸಿ ಹೊಸ ಮಾರುಕಟ್ಟೆ ಪಿಎಸ್‌ಐ ಭಿಮಾಶಂಕರ ನಿಂಗಣ್ಣ ಮಂಗಳವಾರ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಸೇವಿಸುತ್ತಿದ್ದ ಮೂವರನ್ನು ಬಂದಿಸಿದ್ದಾರೆ,ಅಬ್ದುಲ್ ಭಾಷಾ ಶೇಖ್, ಮಹಮದ್ ಹನೀಫ್ ರೆಹಮಾನ್ ಸಾಬ್ ಹಾಗೂ ಮುಜೀಬ್ ಇಸ್ಮಾಯಿಲ್ ಶೇಖ್ ಬಂಧಿತರು. ಕುಮಟಾದಲ್ಲಿ ಸಿಪಿಐ ತಿಮ್ಮಪ್ಪ ನಾಯ್ಕ ದಾಳಿ ನಡೆಸಿ ಅನ್ವರ್ ನಜೀರ್ ಅಹಮದ್ ಶೇಖ್ ಹಾಗೂ ದಾದಾಹಯಾಸ್ ಇಬ್ರಾಹಿಂ ಶೇಖ್ ಎಂಬುವವರನ್ನು ಬಂಧಿಸಿದ್ದಾರೆ. ಕಾರವಾರ ಶಹರ ಠಾಣೆ ಪಿಎಸ್‌ಐ ಸುನೀಲ ಬಂಡಿವಟ್ಟರ್ ಸುಂಕೇರಿ ಸಮೀಪ ರಾಹುಲ್ ರಾಮ ಭಂಡಾರಿ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲರನ್ನೂ ಕಾರವಾರ ಕ್ರಿಮ್ಸ್ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಗಾಂಜಾ ಸೇವಿಸಿರುವುದು ಖಚಿತವಾಗಿದ್ದು, ಅವರ ವಿರುದ್ಧ ಸಂಬಂಧಪಟ್ಟ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ವಶ:
ದಾಂಡೇಲಿ ಶಹರ ಠಾಣೆ ಪಿಎಸ್‌ಐ ಐ.ಆರ್.ಗುಡ್ಡೇಕರ್ ಬುಧವಾರ ಕಾರ್ಯಾಚರಣೆ ನಡೆಸಿ, ಸರ್ಕಾರಿ ಪದವಿ ಕಾಲೇಜ್ ಸಮೀಪ ಕಾರ್ಯಾಚರಣೆ ನಡೆಸಿ, ಆತನಿಂದ 10 ಸಾವಿರ ರೂ. ಮೌಲ್ಯದ 366 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, ಹಳಿಯಾಳ ಗುಂಡೊಳ್ಳಿಯ ಸತೀಶ ನಾರಾಯಣ ಸಕ್ಕಪ್ಪನವರ ಎಂಬಾತನನ್ನು ಬಂಧಿಸಿದ್ದಾರೆ. ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಅವರು ಮಳಗಿ ಸಮೀಪ ದಾಳಿ ನಡೆಸಿ ಬೈಕ್ ನ ಮೇಲೆ ಗಾಂಜಾ ಕೊಂಡೊಯ್ಯುತ್ತಿದ್ದ ಹರಮನಿಕೇರಿ ನಿವಾಸಿ ಮಹಮದ್ ಫಾರೂಕ್ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 40 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.