

ದೇವದುರ್ಗ: ನಾರಾಯಣಪುರ ಜಲಾಶಯದಿಂದ ಶನಿವಾರ 76 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದು, ಸತತ ಎರಡು ದಿನಗಳ ಕಾಲ ಭೋರ್ಗೆರೆದು ಹರಿದ ಕೃಷ್ಣಾನದಿ ಶಾಂತವಾಗಿದೆ. ನೀರಿನ ಪ್ರಮಾಣ ತಗ್ಗಿದ್ದರಿಂದನದಿದಂಡೆ ಗ್ರಾಮಸ್ಥರ ನಿಟ್ಟುಸಿರು ಬಿಟ್ಟಿದ್ದಾರೆ.
ಶುಕ್ರವಾರ ನದಿಗೆ 1.66ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಹೂವಿನಹೆಡಗಿ ಸಮೀಪದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು. ನೀರಿನ ಪ್ರಮಾಣ ಇಳಿಕೆಯಾಗಿದ್ದರಿಂದ ಶನಿವಾರ ಬೆಳಗ್ಗೆ ದೇವಸ್ಥಾನದ ಗೋಪುರ ಗೋಚರವಾಗುತ್ತಿದೆ. ನದಿದಂಡೆ ಜಮೀನು ಅಕ್ಕಪಕ್ಕ ಬಂದಿದ್ದ ನೀರು ಕೂಡ ಇಳಿಕೆಯಾಗಿದ್ದರಿಂದ ರೈತರಿಗೆ ಅನುಕೂಲವಾಗಿದೆ.
ವೀರಗೋಟದ ಮೌನಲಿಂಗೇಶ್ವರ, ಅಂಜಳದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಲಕ್ಷ್ಮೀನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಆಂಜನೇಯ ದೇವಸ್ಥಾನ, ಅರಸಿಣಿಗಿ ಅಣೆಮಲ್ಲೇಶ್ವರ ದೇವಾಲಯ ಹಾಗೂ ಗೂಗಲ್ ಅಲ್ಲಪ್ರಭು ದೇವಸ್ಥಾನದ ಮೆಟ್ಟಿಲುವರೆಗೆ ಬಂದಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗ ಎಂದಿನಂತೆ ಪೂಜಾ ಕೈಂಕಾರ್ಯಗಳು ನಡೆಯುತ್ತಿವೆ.
ಮಹಾರಾಷ್ಟ್ರ ಹಾಗೂ ಕೃಷ್ಣಾ ಮೇಲ್ದಂಡೆಯಲ್ಲಿ ಮಳೆ ಸುರಿಯುತ್ತಿದೆ. ನಾರಾಯಣಪುರ ಜಲಾಶಯಕ್ಕೆ ಅಪಾರ ನೀರು ಬರುತ್ತಿದ್ದು ಹೆಚ್ಚುವರಿ ನೀರು ನದಿಗೆ ಹರಿಸಲಾಗಿದೆ. ಈಗ ಅರ್ಧಕರ್ಧ ನೀರಿನ ಮಟ್ಟ ಇಳಿಕೆಯಾಗಿದೆ. ಸದ್ಯ 25 ಕ್ರಸ್ಟ್ ಗೇಟ್‌ಗಳ ಮೂಲಕ 76 ಸಾವಿರ ಕ್ಯೂಸೆಕ್ ನದಿಗೆ ಬಿಡುಗಡೆ ಮಾಡಲಾಗಿದೆ. 33 ಟಿಎಂಸಿ ಸಾಮರ್ಥ್ಯದ ಸದ್ಯ ಜಲಾಶಯದಲ್ಲಿ 29.32 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಒಳಹರಿವು 77,500 ಕ್ಯೂಸೆಕ್ ದಾಖಲಾಗಿದೆ ಎಂದು ನಾರಾಯಣಪುರ ಜಲಾಶಯ ಆಡಳಿತಾಧಿಕಾರಿ ಪ್ರಕಾಶ ಮುದಗಲ್ ತಿಳಿಸಿದ್ದಾರೆ.
ಇದನ್ನು ಓದಿ: ಮಳೆಯಲ್ಲಿ ಮುಳುಗುವ ಬದರಿನಾರಾಯಣಸ್ವಾಮಿ