More

    ಮಳೆಯಲ್ಲಿ ಮುಳುಗುವ ಬದರಿನಾರಾಯಣಸ್ವಾಮಿ

    ಮಂಡ್ಯ: ಮಳೆ ಬಂದರೆ ಮೇಲುಕೋಟೆಯ ಕ್ಷೇತ್ರದೇವತೆ ಶ್ರೀ ಬದರಿನಾರಾಯಣಸ್ವಾಮಿ ಸನ್ನಿಧಿ ಅಕ್ಷರಶಃ ಕೊಳವಾಗಿ ಮಾರ್ಪಡುತ್ತಿದ್ದು, ದಿನೇದಿನೆ ಶಿಥಿಲಾವಸ್ಥೆಗೆ ತಲುಪುತ್ತಿದೆ.

    ರಾಜ್ಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹೋಗಿ ಒಂದು ವರ್ಷವಾದರೂ ಪುರಾತನ ಕಟ್ಟಡಕ್ಕೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ನೀರಿನಿಂದ ಕೊಳವಾದ ದೇವರಗುಡಿಯಲ್ಲೇ ಶ್ರೀ ಬದರಿನಾರಾಯಣಸ್ವಾಮಿಗೆ ಜಯಂತ್ಯುತ್ಸವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

    ಮಹತ್ವವೇನು?: ದಕ್ಷಿಣ ಬದರಿಕಾಶ್ರಮ ಎಂದೇ ಪ್ರಖ್ಯಾತವಾಗಿರುವ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗವೇ ಇರುವ ಬೃಹತ್ ಎಲಚಿ ವೃಕ್ಷದ ಕೆಳಭಾಗದಲ್ಲಿ ವಿರಾಜಮಾನನಾದ ಕ್ಷೇತ್ರದೇವತೆ ಬದರಿನಾರಾಯಣನ ಸನ್ನಿಧಿ ಅತ್ಯಂತ ಪುರಾತನ ಹಾಗೂ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ.

    ಒಂದು ವರ್ಷದ ಹಿಂದೆ ದೇಗುಲದ ಬೃಹತ್ ಕಲ್ಲಿನ ತೊಲೆ ಕುಸಿದು ವಾಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದೇವಾಲಯದ ಕಟ್ಟಡ ಸಹ ಮಳೆಯಿಂದ ಶಿಥಿಲವಾಗುತ್ತಿದೆ. ಜೀರ್ಣೋದ್ಧಾರ ಕಾಮಗಾರಿಗೆ ಒಂದು ವರ್ಷದ ಹಿಂದೆಯೇ ಯೋಜನಾ ವವರದಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಬದರಿನಾರಾಯಣಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ.

    ಕಳೆದ ವರ್ಷದಂತೆ ಈ ವರ್ಷವೂ ಮಳೆಯ ನೀರಿನಿಂದ ತುಂಬಿಹೋಗಿದ್ದ ದೇವಾಲಯದ ನಡುವೆ ಅರ್ಚಕರು ಅಭಿಷೇಕ ಸೇರಿದಂತೆ ಮತ್ತಿತರ ಪೂಜಾ ವಿಧಿವಿಧಾನ ನೆರವೇರಿಸಿದರೆ ದಿವ್ಯಪ್ರಬಂಧ ಪಾರಾಯಣಗೋಷ್ಟಿಯವರೂ ನಿಂತುಕೊಂಡೆ ಪಾರಾಯಣ ಮಾಡಿ ಬದರಿನಾರಾಯಣ ಜಯಂತಿ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದ್ದಾರೆ.

    ತುರ್ತು ಕ್ರಮ ಅಗತ್ಯವಿದೆ: ಈ ಸಂಬಂಧ ಪತ್ರಿಕೆ ಜತೆ ಮಾತನಾಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಮಹೇಶ್, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ವರ್ಷದ ಹಿಂದೆಯೇ ಸಮಗ್ರ ವರದಿ ನೀಡಿ ಬದರಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಲು ಮನವಿ ಮಾಡಲಾಗಿದೆ. ಮಳೆ ನೀರಿನಿಂದ ದೇಗುಲಕ್ಕೆ ಮತ್ತಷ್ಟು ಅಪಾಯವಾಗುವ ಸಾಧ್ಯತೆಯಿದೆ. ಈ ಕಾರಣ ಮತ್ತೊಮ್ಮೆ ತುರ್ತಾಗಿ ಪತ್ರ ರವಾನಿಸಿ ದುರಸ್ತಿ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts