

ಕಾಸರಗೋಡು: ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಸುಲಭವಾಗಿ ನೀರು ಲಭ್ಯವಾಗಿಸಿ, ಅವುಗಳ ಬಾಯಾರಿಕೆ ತಣಿಸುವ ಮಹತ್ಕಾರ್ಯದಲ್ಲಿ ಅಭಿಯಾನವೊಂದು ನಡೆದುಬಂದಿದೆ. ಎರ್ನಾಕುಳಂನ ಶ್ರೀಮನ್ ನಾರಾಯಣನ್ ಮಿಷನ್ ಈ ಮಹತ್ಕಾರ್ಯ ಹಮ್ಮಿಕೊಂಡಿದೆ.
ಕಳೆದ 12ವರ್ಷಗಳಿಂದ ಕೇರಳಾದ್ಯಂತ ಈ ಸೇವೆಯಲ್ಲಿ ನಿರತರಾಗಿರುವ ನಾರಾಯಣನ್ ಮಿಷನ್ ಪಕ್ಷಿಗಳಿಗೆ ನೀರು ಕುಡಿಯುದಕ್ಕಾಗಿ ಉಚಿತ ಮಣ್ಣಿನ ಪಾತ್ರೆ ವಿತರಿಸುವ ಅಭಿಯಾನ ನಡೆಸುತ್ತಿದೆ. ಕೇರಳದ ಎಲ್ಲ ಹದಿನಾಲ್ಕು ಜಿಲ್ಲೆಗಳಲ್ಲೂ ವಾಹನಗಳ ಮೂಲಕ ಸಾಗಿ, ಪಕ್ಷಿ, ಪ್ರಾಣಿ ಪ್ರಿಯರಿಗೆ ಮಣ್ಣಿನ ಪಾತ್ರೆಗಳನ್ನು ವಿತರಿಸುತ್ತಿದೆ. ರಾಜ್ಯಮಟ್ಟದ ಈ ಅಭಿಯಾನ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನ ವಠಾರಕ್ಕೂ ಆಗಮಿಸಿದ್ದು, ದೇವಾಲಯ ವಠಾರದ ಆಸಕ್ತ ಪಕ್ಷಿ-ಪ್ರಾಣಿ ಪ್ರೇಮಿಗಳಿಗೆ ಮಣ್ಣಿನ ಪಾತ್ರೆ ವಿತರಿಸಿದ್ದಾರೆ.
ಕೆಲವು ಸಂಘ-ಸಂಸ್ಥೆ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿ ಕಚೇರಿ ವಠಾರದಲ್ಲಿ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಇಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರು ಲಭ್ಯವಾಗದೆ ಅದೆಷ್ಟೋ ಮೂಕಪ್ರಾಣಿಗಳು ಜೀವ ಕಳೆದುಕೊಳ್ಳುವುದನ್ನು ತಪ್ಪಿಸಲು ಈ ಕಾರ್ಯಕ್ಕೆ ಮಿಷನ್ ಮುಂದಾಗಿದೆ. ಇದುವರೆಗೆ 1.60 ಲಕ್ಷ ಮಣ್ಣಿನ ಪಾತ್ರೆಗಳನ್ನು ರಾಜ್ಯಾದ್ಯಂತ ವಿತರಿಸಿರುವುದಾಗಿ ಮಿಷನ್ ಕಾರ್ಯಕರ್ತರು ತಿಳಿಸಿದ್ದಾರೆ.