

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಪರಿವರ್ತನೆ ಹುಟ್ಟು ಹಾಕಿದ ಹರಿಕಾರ. ಹಿಂದು ಸಮಾಜದಲ್ಲಿರುವ ಎಲ್ಲ ಜಾತಿ, ಎಲ್ಲ ಮತ ಸಮಾನವಾಗಿರಬೇಕೆಂದು ಪ್ರಾಮಾಣಿಕ ನೆಲೆಯಲ್ಲಿ ತೋರಿಸಿಕೊಟ್ಟವರು ನಾರಾಯಣಗುರುಗಳು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ಗುರುವಾಯನಕೆರೆಯಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿರುವ ಜೀವನ ಮೌಲ್ಯಗಳು ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ಕಿತ್ತೊಗೆದು ನೂರಾರು ವರ್ಷದ ಪರಂಪರೆಗೆ ಗೌರವ ನೀಡಬೇಕು ಎಂದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ದಿವಾಕರ ಕೆ. ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಪೃಥ್ವಿ ಸಾನಿಕಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಉಪಾಧ್ಯಕ್ಷ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಸಹಕಾರಿ ಸಂಘಗಳ ಉಪನಿಬಂಧಕಿ ಬಿ.ವಿ.ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಲಾಯಿಲ ಕರ್ನೋಡಿ ಶಾಲೆ ಶಿಕ್ಷಕಿ ಮಮತಾ ನಿರೂಪಿಸಿದರು.
ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಸಂದರ್ಭ ಧಾರ್ಮಿಕ ಪರಿವರ್ತನೆ ಹುಟು ್ಟಹಾಕಿದವರು ನಾರಾಯಣಗುರುಗಳು. ಸಮಾನತೆಯ ಮೂಲ ಆಶಯದೊಂದಿಗೆ ಜೀವನ ಮುಡಿಪಾಗಿಟ್ಟವರು. ಪ್ರತಿ ವರ್ಷ ತಾಲೂಕುಮಟ್ಟದ ಬೇರೆ ಬೇರೆ ಆಚರಣೆಗಳು ವಿದ್ಯಾರ್ಥಿಗಳ ಮಟ್ಟದಲ್ಲಿ ಒಂದೊಂದು ಕಾಲೇಜುಗಳಲ್ಲಿ ಮಾಡಬೇಕು.
ಹರೀಶ್ ಪೂಂಜ ಶಾಸಕ