ನಾಪೋಕ್ಲು ವಿದ್ಯುತ್ ಸಮಸ್ಯೆಗೆ ಮುಕ್ತಿ

3.npk-1
ಬಲ್ಲಮಾವಟಿ ಗ್ರಾಮದ ಶ್ರೀ ರಾಟೆ ಭದ್ರಕಾಳಿ ದೇವಸ್ಥಾನ ಕಮಾನಿನ ಬಳಿ ಹೊಸ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಯಿತು.
Published on

ನಾಪೋಕ್ಲು: ಇತ್ತೀಚೆಗೆ ಸುರಿದ ಭಾರಿ ಗಾಳಿ- ಮಳೆಗೆ ಹೋಬಳಿಯ ಗ್ರಾಮೀಣ ಪ್ರದೇಶಗಳ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕ್ ಸಿಬ್ಬಂದಿ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಜುಲೈ ತಿಂಗಳಲ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದ್ದು, ಗಾಳಿ- ಮಳೆಗೆ ಮರಗಳ ರೆಂಬೆ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದು, ತಂತಿ ತುಂಡಾಗುವ ಜತೆ ಕಂಬಗಳು ನೆಲಕ್ಕುರುಳಿದ್ದವು. ಇದರಿಂದ ವಿದ್ಯುತ್ ಪೂರೈಕೆ ಇಲ್ಲದೆ ಗ್ರಾಮೀಣ ಜನರು ಸಂಕಷ್ಟ ಅನುಭವಿಸುವಂತಾಗಿತ್ತು. ಅಲ್ಲದೆ ಬಲ್ಲಮಾವಟಿ ಗ್ರಾಮದ ಶ್ರೀರಾಟೆ ಭದ್ರಕಾಳಿ ದೇವಸ್ಥಾನ ಕಮಾನಿನ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಳೆದ ಒಂದೂವರೆ ವರ್ಷದಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಕೋರಿಕೊಂಡಿದ್ದರು. ಶಾಸಕರು ಇಲಾಖೆಯ ಇಂಜಿನಿಯರ್ ಕರೆಸಿ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಇಲಾಖೆ ಬದಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದು, ಜತೆಗೆ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net