

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ನ್ಯಾನೊ ಯೂರಿಯಾ ಗೊಬ್ಬರ ಬಳಕೆ ಕುರಿತು ರೈತರಲ್ಲಿನ್ನೂ ಪೂರ್ಣ ಪ್ರಮಾಣದಲ್ಲಿ ಆಸಕ್ತಿ ಮೂಡಿಲ್ಲ. ಈ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ, ನ್ಯಾನೊ ಗೊಬ್ಬರ ಮಾರಾಟಕ್ಕೆ ಟಾರ್ಗೆಟ್ ನೀಡಿ ರಾಜ್ಯಗಳಿಗೆ ಹಂಚಿಕೆ ಮಾಡಿದೆ.
2020-21 ರಿಂದ ದೇಶದಲ್ಲಿ ಕೃಷಿಗೆ ಲಭ್ಯವಾಗಿದ್ದ ನ್ಯಾನೊ ಯೂರಿಯಾವನ್ನು ಕೇಂದ್ರ ಈಗ ಸಾಕಷ್ಟು ಪ್ರಮಾಣದಲ್ಲಿ ಪೂರೈಸಲು ಸಜ್ಜಾಗಿದೆ.
ಕರ್ನಾಟಕಕ್ಕೆ ಕಳೆದ ಏಪ್ರಿಲ್‌ನಿಂದ-ಸೆಪ್ಟೆಂಬರ್ ಅಂತ್ಯಕ್ಕೆ ದ್ರವ ರೂಪದ ಅರ್ಧಲೀಟರ್ ನ್ಯಾನೊ ಯೂರಿಯಾದ 40 ಲಕ್ಷ ಬಾಟಲಿಗಳು ಪೂರೈಕೆಯಾಗಲಿವೆ.
ಮಾಸಿಕವಾರು ಹಂಚಿಕೆ
ರಾಜ್ಯಕ್ಕೆ ನ್ಯಾನೊ ಗೊಬ್ಬರ ಮಾಸಿಕವಾರು ಹಂಚಿಕೆ ವಿವರ ಹೀಗಿದೆ. ಏಪ್ರಿಲ್‌ನಲ್ಲಿ 4 ಲಕ್ಷ, ಮೇ-5, ಜೂನ್-6, ಜುಲೈ 8, ಆಗಸ್ಟ್-10 ಹಾಗೂ ಸೆಪ್ಟೆಂಬರ್‌ನಲ್ಲಿ 7 ಲಕ್ಷ ಬಾಟಲಿಗಳನ್ನು ಅಲಾಟ್ ಮಾಡಲಾಗಿದೆ.
ರಾಜ್ಯದಲ್ಲಿ ಈ ಬಾಟಲಿಗಳ ಜಿಲ್ಲಾವಾರು ಹಂಚಿಕೆ ಕೂಡ ಆಗಿದೆ. ರಾಯಚೂರು ಜಿಲ್ಲೆಗೆ 3.17 ಲಕ್ಷ, ದಾವಣಗೆರೆ-2.29 ಲಕ್ಷ ಹಾಗೂ ಹಾವೇರಿ ಜಿಲ್ಲೆಗೆ 2.27 ಲಕ್ಷ ಬಾಟಲಿಗಳು ಪೂರೈಕೆಯಾಗಲಿವೆ.
ಭತ್ತವನ್ನು ಅಧಿಕವಾಗಿ ಬೆಳೆಯುವ ಪ್ರದೇಶ ಸಹಿತ ರಾಜ್ಯಾದ್ಯಂತ ಪೂರೈಸಲಾಗುತ್ತಿದ್ದು, ಇದರ ಬಳಕೆ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆಗೆ ಮುಂದಾಗಿದೆ.
ರಸಗೊಬ್ಬರಗಳ ಪೂರೈಕೆ
ಇಲಾಖೆ ಮಾಹಿತಿ ಪ್ರಕಾರ ರಾಜ್ಯಕ್ಕೆ 25.47 ಲಕ್ಷ ಮೆಟ್ರಿಕ್ ಟನ್ ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆಎಸ್, ಎಸ್‌ಎಸ್‌ಪಿ ರಸಗೊಬ್ಬರಗಳು ಪೂರೈಕೆಯಾಗಲಿವೆ.
ಯೂರಿಯಾ-9.10 ಮೆ.ಟ., ಡಿಎಪಿ-4 ಲಕ್ಷ ಮೆ.ಟ., ಎಂಒಪಿ-1.55 ಲಕ್ಷ ಮೆ.ಟ., ಎನ್‌ಪಿಕೆಎಸ್-10 ಲಕ್ಷ ಮೆ.ಟ. ಹಾಗೂ ಎಸ್‌ಎಸ್‌ಪಿ-82 ಸಾವಿರ ಮೆ.ಟ. ರಾಜ್ಯಕ್ಕೆ ಪೂರೈಕೆಯಾಗಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 3.27 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಶೇಂಗಾ, ಮೆಕ್ಕೆಜೋಳ, ಹತ್ತಿ, ಸಿರಿಧಾನ್ಯ, ಸೂರ‌್ಯಕಾಂತಿ, ಹೆಸರು, ರಾಗಿ ಇತ್ಯಾದಿ ಅಂದಾಜು 3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಿರೀಕ್ಷಿಸಲಾಗಿದೆ.
ಸದ್ಯಕ್ಕೆ 6434 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಯೂರಿಯಾ ಸೇರಿ 24030 ಮೆಟ್ರಿಕ್‌ಟನ್ ವಿವಿಧ ರಸಗೊಬ್ಬರಗಳು ಹಾಗೂ ಅಂದಾಜು 10 ಸಾವಿರ ಟನ್ ಬಿತ್ತನೆ ಬೀಜಗಳ ಸ್ಟಾಕ್ ಇದೆ.
ನ್ಯಾನೊ ಗೊಬ್ಬರದ ಅರ್ಧಲೀಟರ್ ಬಾಟಲಿಗೆ 225 ರೂ.ವೆಚ್ಚವಾಗಲಿದೆ. ಬೆಳೆ ಹಂತವನ್ನಾಧರಿಸಿ 50ರಿಂದ 80 ಮಿ.ಲೀ.ನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 226 ರೂ. ದರದ 50 ಕೆಜಿ ಯೂರಿಯಾ ಚೀಲವನ್ನು ಅಂಗಡಿಯಿಂದ ಸಾಗಿಸಲು ರೈತರು ಶ್ರಮಿಸಬೇಕಾಗುತ್ತದೆ. 600 ರೂ. ಬೆಲೆಯ ನ್ಯಾನೊ ಡಿಎಪಿ ಕೂಡ ಬಿಡುಗಡೆಯಾಗಿದೆ. ಆದರೆ, ಇದರ ಬಳಕೆಯ ಕುರಿತಂತೆ ಟಾರ್ಗೆಟ್ ಇಲ್ಲ.ಪಿ.ರಮೇಶ್‌ಕುಮಾರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಚಿತ್ರದುರ್ಗ
ಮಾಮೂಲಿ ಯೂರಿಯಾವನ್ನು ಬಳಸಲು ರೈತರು ಆಸಕ್ತಿ ತೋರಿಸುತ್ತಿದ್ದಾರೆ ವಿನಾ ನ್ಯಾನೊ ಗೊಬ್ಬರದ ಬಗ್ಗೆ ಅಲ್ಲ. ಕೃಷಿ ಇಲಾಖೆ ಜಾಗೃತಿ ಮೂಡಿಸಿದರೆ ರೈತರು ನ್ಯಾನೊ ಯೂರಿಯಾದ ಬಳಕೆಗೆ ಮುಂದಾಗಬಹುದು.ಬಸ್ತಿಹಳ್ಳಿ ಸುರೇಶ್‌ಬಾಬು, ಅಧ್ಯಕ್ಷ, ಜಿಲ್ಲಾ ರೈತ ಸಂಘ, ಚಿತ್ರದುರ್ಗ