

ರಾಮನಗರ: ಪರಿಸರ ಮಾಲಿನ್ಯಕ್ಕೆ ಹಾಲಿನ ಪ್ಯಾಕೆಟ್ಗಳ ಪಾತ್ರವೇ ಹೆಚ್ಚು ಎನ್ನುವ ಆರೋಪದಿಂದ ಮುಕ್ತವಾಗುವ ನಿಟ್ಟಿನಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ಬಮುಲ್ (ಬೆಂಗಳೂರು ಹಾಲು ಒಕ್ಕೂಟ) ಪ್ರಾಯೋಗಿಕವಾಗಿ ಬಯೋಡಿಗ್ರೇಡಬಲ್ (ಜೈವಿಕವಾಗಿ ವಿಘಟನೆ ಹೊಂದುವ) ಕವರ್ನಲ್ಲಿ ನಂದಿನ ಹಾಲನ್ನು ಗ್ರಾಹಕರ ಮನೆಗೆ ತಲುಪಿಸಲಿದೆ.
ಸರ್ಕಾರದ ಪ್ಲಾಸ್ಟಿಕ್ ನಿಷೇಧದ ವಿನಾಯತಿ ಪಡೆದುಕೊಂಡಿರುವ ಬಮುಲ್ ಪ್ರಸ್ತುತ ಹಾಲನ್ನು ಪಾಲಿಥಿನ್ ಕವರ್ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದೆ. ಈಗ ಬಳಕೆ ಮಾಡುತ್ತಿರುವ ಪ್ಯಾಕೆಟ್ಗಳು ಪರಿಸರಕ್ಕೆ ಮಾರಕವಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಂದಡಿ ಇರಿಸಿರುವ ಬಮುಲ್ ಜೈವಿಕವಾಗಿ ವಿಘಟನೆ ಗೊಳ್ಳುವ ಪ್ಲಾಸ್ಟಿಕ್ ಕವರ್ನಲ್ಲಿ ಹಾಲು ಪ್ಯಾಕಿಂಗ್ ಮಾಡಲು ಮುಂದಾಗಿದೆ.
ಏನಿದು ಹೊಸ ಪ್ರಯತ್ನ?
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ, ಪ್ರಕೃತಿಯಲ್ಲಿ ಕರಗಲು ಹಾಲಿನ ಕವರ್ಗೆ ಕನಿಷ್ಠ 500 ವರ್ಷಗಳ ಬೇಕು. ಆದರೆ, ಬಮುಲ್ ಬಳಕೆ ಮಾಡಲು ಉದ್ದೇಶಿಸಿರುವ ಬಯೋ ಡಿ ಗ್ರೇಡಬಲ್ ಆಗಿದ್ದು, ಇದು ವಾತಾವರಣದಲ್ಲಿ ಇತರೆ ಸಾವಯವ ವಸ್ತುಗಳಂತೆ ಬಹುಬೇಗ ವಿಘಟನೆ ಹೊಂದುತ್ತದೆ. ಹೊಸ ಪರಿಸರ ಸ್ನೇಹಿ ಪ್ಲಾಸ್ಟಿಕ್ ಕವರ್ಗಳು 6 ತಿಂಗಳಲ್ಲಿ ಕರಗಿ ಹೋಗುತ್ತದೆ. ಇದರಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಗೆ ಪರಿಹಾರದ ದೊರೆಯಲಿದೆ.
ಕನಕಪುರ ಘಟಕದಲ್ಲಿ ತಯಾರಿಕೆ
ಬಮುಲ್ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾ ಡೇರಿ ಪ್ಲಾಂಟ್ನಲ್ಲಿ ಹೊಸದಾಗಿ ಸಿದ್ಧವಾಗಿರುವ ಡಿ- ಕಂಪೋಸಬಲ್ ಕವರ್ಗಳನ್ನು ಬಳಕೆ ಮಾಡುತ್ತಿದೆ. ಪ್ರಾಯೋಗಿಕವಾಗಿ 2 ಲಕ್ಷ ಬಯೋ ಡಿ ಗ್ರೇಡಬಲ್ ಕವರ್ಗಳನ್ನು ಬಳಕೆ ಮಾಡಿ ಹಾಲನ್ನು ಪ್ಯಾಕ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯಾಪ್ತಿಯ ಎಲ್ಲ ಹಾಲನ್ನು ಈ ಪರಿಸರ ಸ್ನೇಹಿ ಕವರ್ ಬಳಕೆ ಮಾಡಿಯೇ ಪ್ಯಾಕಿಂಗ್ ಮಾಡುವ ಗುರಿ ಹೊಂದಿದೆ. ಬಯೋ ಡಿ ಕಂಪೋಸಬಲ್ ಪ್ಲಾಸ್ಟಿಕ್ ಕವರ್ಗಳು ವಿದೇಶಿ ತಂತ್ರಜ್ಞಾನ ಹೊಂದಿದ್ದು, ಈ ಕವರ್ಗಳನ್ನು ಜೋಳದಿಂದ ತಯಾರಿಸಲಾಗುತ್ತದೆ. ಹಾಲಿನ ಬಳಕೆ ಮಾಡುತ್ತಿರುವ ಕವರ್ನಂತೆಯೇ ಇದು ಇರಲಿದ್ದು, ಹಾಲಿ ಬಳಕೆ ಮಾಡುತ್ತಿರುವ ಪಾಲಿಥೀನ್ ಕವರ್ಗಿಂತ ಹೊಸ ಕವರ್ ಸ್ವಲ್ಪ ಹೆಚ್ಚು ಬೆಲೆ ಇರಲಿದೆ.
ದೇಶದಲ್ಲಿ ಪ್ರಥಮ ಡಿಕೆಸು
ಕನಕಪುರ ಮೆಗಾ ಡೇರಿಯಲ್ಲಿ ಈ ಪ್ರಯತ್ನಕ್ಕೆ ಚಾಲನೆ ನೀಡಲಾಗಿದ್ದು, ಇದನ್ನು ಬಮುಲ್ ನಿರ್ದೇಶಕರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಜೂ.5ರಂದು ಪರಿಶೀಲನೆ ನಡೆಸಿ, ಬಮುಲ್ನಿಂದ ಬಯೋ ಡಿ ಗ್ರೇಡಬಲ್ ಹಾಲಿನ ಪ್ಯಾಕೆಟ್ಗಳನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ ಎಂದು ಅವರ ತಿಳಿಸಿದ್ದಾರೆ.