

ಅನಂತ ನಾಯಕ್ ಮುದ್ದೂರು
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ನಂಚಾರು ಹಲವು ಊರುಗಳನ್ನು ಸಂಪರ್ಕಿಸುತ್ತದೆ. ಈ ಊರಿನ ಸಮೀಪವೇ ಸೀತಾನದಿ ಹರಿಯುತ್ತಿದ್ದು, ಇದಕ್ಕೆ ಹಲವು ವರ್ಷಗಳ ಹಿಂದೆಯೇ ಸೇತುವೆ ನಿರ್ಮಿಸಲಾಗಿದೆ. ಹಲವು ವರ್ಷಗಳ ಹಿಂದೆ ಈ ಭಾಗದ ರಸ್ತೆಗಳೆಲ್ಲವೂ ಮೇಲ್ದರ್ಜೆಗೇರಿದ್ದು, ಆದರೆ ಈ ಸೇತುವೆ ಗುಣಮಟ್ಟ ಮಾತ್ರ ಕೆಡಲಾರಂಭಿಸಿದೆ.
ಇತ್ತೀಚೆಗೆ ಸೇತುವೆಯ ಮೇಲ್ಪದರ ಕಿತ್ತು ಹೋಗಿದ್ದು, ಅಲ್ಲಲ್ಲಿ ಗುಂಡಿ ಕಾಣುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರ, ಕಾರ್ಖಾನೆಯ ಹಾಗೂ ಬೃಹತ್ ವಾಹನಗಳು ಈ ಸೇತುವೆಯನ್ನು ಅವಲಂಬಿಸಿದ್ದು, ಹೆಚ್ಚಿನ ಮಟ್ಟದ ಸಂಚಾರ ಈ ಸೇತುವೆ ಮೇಲೆಯೇ ನಡೆಯುತ್ತದೆ.
ಸೇತುವೆಯ ಇಕ್ಕೆಲಗಳ ಸಿಮೆಂಟ್ ಕಂಬಿಗಳು ಸುಣ್ಣ ಬಣ್ಣ ಬಳಿಯದೇ ವರ್ಷಗಳೇ ಉರುಳಿದ್ದು, ತುಕ್ಕು ಹಿಡಿಯಲಾರಂಭಿಸಿವೆ. ಕೆಲವು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಸ್ಥಳೀಯರಿಗೆ ಅಪಾಯದ ಮುನ್ಸೂಚನೆ ಕಂಡಿದೆ. ದಿನಗಳೆದಂತೆ ಸೇತುವೆಯ ಸ್ಥಿತಿ ದುಸ್ಥಿತಿಯತ್ತ ಸಾಗುತ್ತಿದ್ದು, ಶೀಘ್ರವೇ ಸೇತುವೆ ನದಿ ಕುಸಿದು ಪಾಲಾಗುವ ಸಾಧ್ಯತೆ ಇದೆ.
ಸೇತುವೆ ಮೇಲೆ ಹೊಂಡಗಳಿದ್ದು, ಮಳೆಗಾಲ ಸಂದರ್ಭ ನೀರು ತುಂಬಿ ಹೊಂಡಗಳು ಗೋಚರಿಸುವುದಿಲ್ಲ. ಇದು ಅಪಘಾತಕ್ಕೆ ಆಹ್ವಾನ ನೀಡಿದಂತಿದ್ದು, ಸ್ಥಳೀಯ ಪಂಚಾಯಿತಿ, ಅಧಿಕಾರಿಗಳು ಸಹಿತ ಸಂಬಂಧಿಸಿದ ಇಲಾಖೆ ಶೀಘ್ರವೇ ದುರಸ್ತಿಗೊಳಿಸಿ ಅಪಾಯವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಂಡಾರುಕಟ್ಟೆ, ಶಿರೂರು ಮೂರ್ಕೈ, ಗೋಳಿಯಂಗಡಿ ಸಂಪರ್ಕಿಸುವ ಪ್ರಮುಖ ಕೊಂಡಿ ಸೇತುವೆ. ಸೇತುವೆಯ ಸಿಮೆಂಟ್ ಕಾಂಕ್ರೀಟ್ ಮೇಲ್ಭಾಗ ಕಿತ್ತು ಹೋಗಿದ್ದು, ಅಲ್ಲಲ್ಲಿ ಹೊಂಡಗಳು ಉಂಟಾಗಿದೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಈ ಸೇತುವೆಯ ಮೇಲಿನ ಹೊಂಡಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಎಡೆಮಾಡಿಕೊಡಬೇಕು.- ಮಹೇಶ್ ಕುಂದರ್, ರಿಕ್ಷಾ ಚಾಲಕ, ನಂಚಾರು ದಿನನಿತ್ಯ ಸಂಚರಿಸುವ ಈ ಸೇತುವೆಯ ಮೇಲ್ಭಾಗದ ಕಾಂಕ್ರಿಟ್ ಕಿತ್ತು ಹೋಗಿದೆ. ಇದರಿಂದಾಗಿ ಅಪಾಯ ಆಹ್ವಾನಿಸಿದಂತಾಗಿದೆ. ಶೀಘ್ರವೇ ಸಂಬ್ಬಂಧಿತ ಇಲಾಖೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ.- ಮಂಜುನಾಥ್ ಹೆಗ್ಡೆ ಆವರ್ಸೆ, ಸ್ಥಳೀಯ https://www.vijayavani.net/revitalization-of-ancient-amai-lake