More

    ಮಠದ ಕೆರೆಮೂಲೆ ಕೆರೆಯಲ್ಲಿ ನೀರು ಬತ್ತಿ ಸಾವಿರಾರು ಮೀನುಗಳು ಸಾವು

    ಉಪ್ಪಿನಂಗಡಿ: ಲಕ್ಷಾಂತರ ರೂ. ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾದ ಗ್ರಾ.ಪಂ ಅಧೀನದ ಸಾರ್ವಜನಿಕ ಕೆರೆಯ ನೀರು ಬತ್ತಲಾರಂಭಿಸಿದ್ದು, ಕೆರೆಯಲ್ಲಿ ಸಾಕುತ್ತಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

    ಮಠದ ಕೆರೆಮೂಲೆ ಎಂದೇ ಖ್ಯಾತಿ ಹೊಂದಿದ ಗ್ರಾ.ಪಂಗೆ ಸೇರಿದ ಕೆರೆಯೊಂದು ಅನಾದಿಕಾಲದಿಂದಲೂ ರೈತರ ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ಆದರೆ ಭತ್ತದ ಗದ್ದೆಗಳು ಮರೆಯಾಗಿ ಅಡಕೆ ತೋಟಗಳು ಎಲ್ಲೆಡೆ ಕಾಣಲಾರಂಭಿಸಿದಾಗ ಹಾಗೂ ಎಲ್ಲೆಡೆ ಕೊಳವೆ ಬಾವಿಗಳನ್ನು ಕೊರೆಯಲಾರಂಭಿಸಿದಾಗ ಎಲ್ಲ ಕೆರೆಗಳಂತೆ ಈ ಕೆರೆಯೂ ಬತ್ತಿ ಹೋಗಿತ್ತು.

    ಸರ್ಕಾರ ಎಲ್ಲ ಸರ್ಕಾರಿ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಆದೇಶ ಹೊರಡಿಸಿದ್ದರಿಂದ ಉಪ್ಪಿನಂಗಡಿ ಗ್ರಾಮದ ಕೆರೆಮೂಲೆಯಲ್ಲಿನ ಕೆರೆಯೂ ಅಭಿವೃದ್ಧಿಗೊಳ್ಳುವ ಯೋಗ ಪಡೆಯಿತು. ಅದರಂತೆ ಆಗಿನ ಶಾಸಕರು 25 ಲಕ್ಷ ರೂ. ವೆಚ್ಚದಲ್ಲಿ ಇದೇ ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಮಂಜೂರುಗೊಳಿಸಿದ್ದು, ಬಳಿಕ ಮತ್ತೆ ಗ್ರಾ.ಪಂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಹೂಳೆತ್ತಲು 25 ಲಕ್ಷ ರೂ. ಮಂಜೂರುಗೊಳಿಸಿ ಕೆರೆ ಪುನರುಜ್ಜೀವನಗೊಳಿಸಲಾಗಿತ್ತು.

    ಕೆರೆ ತುಂಬಾ ನೀರು ತುಂಬಿ ಪರಿಸರದ ಅಂತರ್ಜಲ ಹೆಚ್ಚಾಗಿತ್ತು. ಈ ಮಧ್ಯೆ ಸ್ಥಳೀಯರೊಬ್ಬರು ಗ್ರಾ.ಪಂ ಅನುಮತಿ ಪಡೆದು ಕೆರೆಯಲ್ಲಿ ಮೀನು ಸಾಕಣೆ ಆರಂಭಿಸಿದ್ದರು. ಆದರೆ ಮೀನು ಸಾಕಣೆ ಆರಂಭಿಸಿ 8 ತಿಂಗಳಾಗುತ್ತಲೇ ಕೆರೆಯ ನೀರು ಬತ್ತಲಾರಂಭಿಸಿದ್ದು, ಕೆರೆಯಲ್ಲಿ ಬಿಡಲಾಗಿದ್ದ ಮೀನುಗಳು ಸಾಯಲಾರಂಭಿಸಿದೆ. ಇದರಿಂದಾಗಿ ಮೀನು ಸಾಕಣೆ ಮಾಡಿ ಆರ್ಥಿಕ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ವ್ಯಕ್ತಿ ನಷ್ಟಕ್ಕೆ ತುತ್ತಾಗಿದ್ದಾರೆ.

    ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಅಣೆಕಟ್ಟಿನ ಹಿನ್ನೀರು ತುಂಬಿದ್ದು, ನದಿಯ ನೀರನ್ನು ಕೆಲ ಕಾಲ ಈ ಕೆರೆಗೆ ಹಾಯಿಸಿದ್ದರೆ, ಮೀನುಗಾರಿಕೆಗೂ ಅನುಕೂಲವಾಗುತ್ತಿತ್ತು. ಅಂತರ್ಜಲಕ್ಕೂ ಅನುಕೂಲವಾಗುತ್ತಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts