ಸಂಜೆ ವೇಳೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ; ರೈಲು ಹತ್ತುವುದೇ ತ್ರಾಸದಾಯಕ!

Metro Rush
Published on

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಈ ಹೊತ್ತಿನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು, ಬಹುತೇಕ ಜನರು ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ಪರಿಣಾಮ ಸಂಜೆ 6 ರಿಂದ ರಾತ್ರಿ 9ರವರೆಗೆ ಪ್ರಮುಖ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗುತ್ತಿದ್ದು, ಪ್ರಯಾಣಿಕರು ನುಸುಳಿಕೊಂಡೇ ರೈಲು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಯಾಗುವ ಹೊತ್ತಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ರಸ್ತೆಯ ಮೇಲೆ ನೀರು ಹರಿದು, ಎಲ್ಲಿ ಹೊಂಡ&ಗುಂಡಿ ಇದೆ ಎಂಬುದೇ ತಿಳಿಯುವುದಿಲ್ಲ. ಜೋರಾಗಿ ಮಳೆ ಸುರಿವ ಹೊತ್ತಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವುದೂ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ. ಮಳೆ ಬೀಳುತ್ತಿರುವ ಕಾರಣ ಕ್ಯಾಬ್​ ದರವೂ ಏರಿದೆ. ಹೀಗಾಗಿ ಒಂದು ವಾರದಿಂದ ಬಹುತೇಕ ಜನರು ಸಂಜೆ ಪ್ರಯಾಣಕ್ಕೆ ಮೆಟ್ರೋ ಬಳಸುತ್ತಿದ್ದಾರೆ.

ಪ್ರಮುಖ ನಿಲ್ದಾಣಗಳಲ್ಲಿ ಜನದಟ್ಟಣೆ

ಸುರಕ್ಷಿತ ಪ್ರಯಾಣ ಹಾಗೂ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಪ್ರಯಾಣಕ್ಕೆ ಜನರು ಪ್ರಾಶಸ ನೀಡುತ್ತಿದ್ದಾರೆ. ಹೀಗಾಗಿ ಮೆಜೆಸ್ಟಿಕ್​, ಎಂ.ಜಿ. ರಸ್ತೆ, ಟ್ರಿನಿಟಿ, ಇಂದಿರಾನಗರ, ಬನಶಂಕರಿ, ರಾಜಾಜಿನಗರ, ಯಶವಂತಪುರ ಸೇರಿ ಪ್ರಮುಖ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಈ ವೇಳೆ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ನಿಯಂತ್ರಿಸಲು ಹರಸಾಹಸಪಡುತ್ತಾರೆ.

47 ರೈಲುಗಳು ಕಾರ್ಯಾಚರಣೆ

ಸದ್ಯ, ನಮ್ಮ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರತಿ ದಿನ 6.5 ರಿಂದ 7 ಲಕ್ಷ ಜನ ಪ್ರಯಾಣಿಸುತ್ತಿದ್ದು, ದಿನದಿಂದ ದಿನಕ್ಕೆ ಸಂಜೆ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಸದ್ಯ ಎರಡು ಕಾರಿಡಾರ್​ನಲ್ಲಿ ತಲಾ 6 ಬೋಗಿಗಳನ್ನೊಳಗೊಂಡ 47 ರೈಲುಗಳು ಸಂಚರಿಸುತ್ತಿವೆ. ಬಿಎಂಆರ್​ಸಿಲ್​ ಲೆಕ್ಕಾಚಾರದ ಪ್ರಕಾರ ಪ್ರಸಕ್ತ ವರ್ಷದಲ್ಲಿ 78 ರೈಲುಗಳು ಸೇವೆ ನೀಡಬೇಕಿತ್ತು. ಸದ್ಯ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗಲು ರೈಲುಗಳ ಕೊರತೆಯೂ ಕಾರಣವಾಗಿದೆ. ಪ್ರಸ್ತುತ ದಟ್ಟಣೆಯಿರುವ ಅವಧಿಯಲ್ಲಿ ಐದು ನಿಮಿಷಕ್ಕೊಂದು ರೈಲು ಓಡಾಡುತ್ತಿದ್ದು, ಉಳಿದ ಹೊತ್ತಿನಲ್ಲಿ 15 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸುತ್ತಿವೆ.

ಮೆಟ್ರೋ ಪ್ರಯಾಣಿಕರ ವಿವರ

ಕಳೆದ ಐದು ದಿನದಲ್ಲಿ ನಮ್ಮ ಮೆಟ್ರೋದಲ್ಲಿ 3.5 ಕೋಟಿ ಜನರು ಪ್ರಯಾಣಿಸಿದ್ದಾರೆ. ಮೇ 6 ರಂದು 7.42 ಲಕ್ಷ, ಮೇ 7 ರಂದು 6.85 ಲಕ್ಷ, ಮೇ 8 ರಂದು 7.28 ಲಕ್ಷ, ಮೇ 9 ರಂದು 7.60 ಲಕ್ಷ ಹಾಗೂ ಮೇ 10 ರಂದು 6.76 ಲಕ್ಷ ಮಂದಿ ಓಡಾಟ ನಡೆಸಿದ್ದಾರೆ.

ಕಳೆದ ಗುರುವಾರ ಮೆಜೆಸ್ಟಿಕ್​ ನಿಲ್ದಾಣದಲ್ಲಿ ಸಂಜೆ ಅಧಿಕ ಜನರಿದ್ದರು. ಪ್ಲಾಟ್​ಫಾರಂ ತಲುಪುವುದೇ ಸವಾಲಾಗಿತ್ತು. ಬರುತ್ತಿದ್ದ ರೈಲೆಲ್ಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಹೀಗಾಗಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ರೈಲಿಗಾಗಿ ಕಾಯಬೇಕಾಗಿ ಬಂತು.

-ಕೆ.ಶ್ರಾವ್ಯಾ, ಐಟಿ ಉದ್ಯೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net