

ಬೆಂಗಳೂರು: ನಮ್ಮ ಮೆಟ್ರೋ ಸಿಬ್ಬಂದಿ ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ಅಸಭ್ಯ ವರ್ತನೆ ತೋರಿರುವಂತಹ ಘಟನೆ ನಗರದ ಜಾಲಹಳ್ಳಿ ಮೆಟ್ರೋ ಪ್ಲ್ಯಾಟ್ಫಾರ್ಮ್ನಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆ ಮೆಟ್ರೋ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ
ಮೆಟ್ರೋ ಸಿಬ್ಬಂದಿ ಓರ್ವ ಪ್ಲಾಟ್‌ಫಾರಂನ ಎದುರು ಭಾಗದಲ್ಲಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲವು ಸನ್ನೆಗಳನ್ನು ಮಾಡುತ್ತ ನಿರಂತರವಾಗಿ ನನ್ನನ್ನು ದಿಟ್ಟಿಸಿ ನೋಡುತ್ತಿರುವಂತಹ ಅನುಭವ ನನಗೆ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಉಂಟಾಗಿದೆ. ನಾನು ಆತನನ್ನು ಪ್ರಶ್ನೆ ಮಾಡಿದೆ. ಆದರೆ ಆತ ಕೆಲವು ಸನ್ನೆಗಳನ್ನು ಮಾಡುವ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ಹಾಗಾಗಿ ನಾನು ವಿಡಿಯೋ ಮಾಡಲು ಆರಂಭಿಸಿದ ಬಳಿಕ ಅವನು ಅಲ್ಲಿಂದ ಹೊರಟು ಹೋದ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಾಗಿ ಮೆಟ್ರೋ ಮೇಲಧಿಕಾರಿಗಳಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆದರೆ ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಘಟನೆಯ ವಿಡಿಯೋದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್ ಮಾಡಿರುವ ಮಹಿಳೆ ‘ನಾನು ಇಲ್ಲಿ ಸುರಕ್ಷಿತಳಲ್ಲ ಎಂಬಂತೆ ಭಾಸವಾಗುತ್ತಿದೆ’ ಎಂದಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ದೂರು ದಾಖಲಾಗುತ್ತಿದ್ದಂತೆ ನಮ್ಮ ಮೆಟ್ರೋ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.