ಹೊಸ ಪಾಲಿಕೆಗೆ ನಾಡಪ್ರಭು ಕೆಂಪೇಗೌಡ ಹೆಸರಿಡಿ

Kempegowda
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗೆ ಹಾಗೂ ನಮ್ಮ ಮೆಟ್ರೋಗೆ ‘ನಾಡಪ್ರಭು ಕೆಂಪೇಗೌಡ’ ಹೆಸರು ಇಡಬೇಕೆಂದು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಕೇಂದ್ರ ಸಮಿತಿ ಒತ್ತಾಯಿಸಿದೆ.

ಆಡಳಿತಾತ್ಮಕ ನೆಪಹೇಳಿ ಬಿಬಿಎಂಪಿಯನ್ನು 5 ಭಾಗವನ್ನಾಗಿ ಛಿದ್ರಗೊಳಿಸಿ ಕೆಂಪೇಗೌಡ ಹೆಸರನ್ನು ಅಳಿಸಿ ಹಾಕಲಾಗುತ್ತಿದೆ. ನಗರದಲ್ಲಿ ಕೆಂಪೇಗೌಡ ನಿರ್ಮಿಸಿದ ಗಡಿ ಗೋಪುರ, ಕೆರೆ, ಕಟ್ಟೆ, ಕಲ್ಯಾಣಿ, ಕುಡಿಯುವ ನೀರಿನ ಬಾವಿಗಳು ಮತ್ತು ಧಾರ್ಮಿಕ ಕ್ಷೇತ್ರವನ್ನು ಹಾಳು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ವಿಭಾಗಕ್ಕೂ ಬೇರೆ ಗಣ್ಯರ ಹೆಸರು ಇಡುವ ಪ್ರಸ್ತಾವನೆ ಬಂದು ಬರಬಹುದು. ಇದರಿಂದ ಅವರ ಹೆಸರಿಗೂ ಧಕ್ಕೆ ಬರಲಿದೆ. ಹಾಗಾಗಿ, ನಗರದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಪಾಲಿಕೆಗೆ, ಕೆಂಪೇಗೌಡ ಹೆಸರು ನಾಮಕಾರಣ ಮಾಡಬೇಕು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಮಲ್ಲಯ್ಯ ಹೇಳಿದ್ದಾರೆ.

500 ವರ್ಷದ ಹಿಂದೆಯೇ ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಕುರಿತು ದೂರದೃಷ್ಟಿ ಹೊಂದಿದ್ದ ಮುತ್ಸದ್ದಿ ನಾಯಕ. ಅವರ ಆಡಳಿತ ಜನಪರವಾಗಿತ್ತು. ಹಂಪಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದ ಕಾಲದಲ್ಲಿ ಪ್ರೇರಣೆ ಪಡೆದು ಬೆಂಗಳೂರನ್ನು ಅಭಿವೃದ್ಧಿಪಡಿಸುವ ಉದ್ದೇಶ ಅವರಿಗಿತ್ತು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರ ಖ್ಯಾತಿಗೆ ಅವರೇ ಮೂಲ ಕಾರಣ. ವೃತ್ತಿಯಾಧಾರಿತ ಪೇಟೆ ನಿರ್ಮಿಸಿ, ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿ, ಕೆಂಪೇಗೌಡರ ಹೆಸರನ್ನು ನಮ್ಮ ಮೆಟ್ರೋಗೆ ಇಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net