ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ನಿಶ್ಚಿತ

12-05-rama-Ambedkar
Published on

* ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

*ರಾಮನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ರಾಮನಗರ

ಯಾರೇ ಎಷ್ಟೇ ಕುತಂತ್ರ ಮಾಡಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ಜಿಲ್ಲೆಯ ಅಭಿವೃದ್ಧಿಗೆ ತಡೆ ಹಾಕಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಮಾತನಾಡಿದರು. ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಆಗುವುದು ನಿಶ್ಚಿತ ಎಂದ ಅವರು, ಕಳೆದ 25-30 ವರ್ಷದಲ್ಲಿ ಬೆಂಗಳೂರಿನಿಂದ ದೆಹಲಿವರೆಗೆ ಅವಕಾಶ ನೀಡಿದಿರಿ. ಆದರೂ ಬರೇ ‘ಬುಟ್ಟಿ ಬೇವಿನ ಸೊಪ್ಪು ನಂದೆ ಬೆಳಗು ಪೂಜಾರಿ’ ಅನ್ನುವಂತಾಯಿತು. ಬರೀ ಖಾಲಿ ಟ್ರಂಕು, ಖಾಲಿ ಮಾತು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೆಸರು ಹೇಳದೆ ಕುಟುಕಿದರು.

ರಾಮನಗರ ಅಭಿವೃದ್ಧಿಗೆ 150 ಕೋಟಿ ರೂ., ನೀರಾವರಿ ಇಲಾಖೆಯಿಂದ 400 ಕೋಟಿ ರೂ. ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡಲಾಗುವುದು ಎಂದರು.

100 ಎಕರೆ ಪ್ರದೇಶವನ್ನು ಗುರುತಿಸಿ ಬಡವರಿಗೆ ನಿವೇಶನ ಹಂಚಬೇಕು ಎಂದು ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ಇದರ ಬಗ್ಗೆ ಸಭೆ ನಡೆಸಲಾಗುವುದು. ಚನ್ನಪಟ್ಟಣದಲ್ಲಿ 2 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ವಸತಿ ಸಚಿವ ಜಮೀರ್ ಅವರು ನಿವೇಶನ ಅಭಿವೃದ್ಧಿಗೆ ಎಂದು 40 ಕೋಟಿ ರೂ. ಮೀಸಲಿಟ್ಟಿದ್ದಾರೆ. ನಿಮ್ಮ ಊರಿನಲ್ಲಿಯೇ ಉದ್ಯೋಗ ದೊರೆಯುವಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.

ನಮ್ಮ ನಾಲ್ಕು ಶಾಸಕರು ನಿಮ್ಮ ಜತೆ ಸದಾ ಇರುತ್ತಾರೆ. ಇಲ್ಲಿಂದ ಬಿಟ್ಟು ಹೋದವರ ಬಗ್ಗೆ ಚಿಂತೆ ಮಾಡಬೇಡಿ. ಬಡತನ, ಸಿರಿತನ ಶಾಶ್ವತವಲ್ಲ. ಆದರೆ, ನಾವು ಮಾಡುವ ಕೆಲಸಗಳು ಶಾಶ್ವತ ಎಂದರು.

ಸರ್ವರಿಗೂ ಶಕ್ತಿ ತುಂಬಿದ ನಾಯಕ

ಪರಿಶಿಷ್ಟ ಜಾತಿ, ಪಗಂಡಕ್ಕೆ ಮಾತ್ರ ಸೀಮಿತ ಮಾಡಿ ಅಂಬೇಡ್ಕರ್ ಅವರನ್ನು ಕಟ್ಟಿ ಹಾಕಲಾಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂದು ಸಂವಿಧಾನದ ಮೂಲಕ ಸಮಾನತೆ ತಂದವರು. ನಮ್ಮನ್ನು ನಾವೇ ಆಳಿಕೊಳ್ಳುವುದಕ್ಕೆ ಶಕ್ತಿ ತುಂಬಿದವರು ಎಂದು ಡಿಕೆಶಿ ಬಣ್ಣಿಸಿದರು.

ಎಲ್ಲ ವರ್ಗದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಗುರಿ. ಇದು ಅಂಬೇಡ್ಕರ್ ಅವರಿಂದ ಕಲಿತ ಪಾಠ. ಅವರ ಪ್ರತಿಮೆಗೆ ಪೂಜೆ ಮಾಡುವುದಕ್ಕಿಂತ ಪ್ರತಿಭೆಗೆ ಪೂಜೆ ಮಾಡಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಈಗಾಗಲೇ ರಾಮನಗರ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಿದೆ, ಮತ್ತಷ್ಟು ಅಭಿವೃದ್ಧಿಗೆ ಕಾರ್ಯಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಮಳವಳ್ಳಿಯ ನರೇಂದ್ರಸ್ವಾಮಿ, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಎಂಎಲ್‌ಸಿ ಎಸ್.ರವಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಎಂಎಸ್‌ಸಿ ಎಸ್ ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಮುಂತಾದವರು ಇದ್ದರು.

ಮೊಲದ ಬಾರಿ ಶಾಸಕರಾದವರು ರಾಜ್ಯದ ಮುಖ್ಯಮಂತ್ರಿ ಆದರು. 8 ಬಾರಿ ಶಾಸಕರಾದ ಡಿ.ಕೆ.ಶಿವಕುಮಾರ್ ಆಡಳಿತದ ಅನುಭವವಿದ್ದು, ಅವರು ಮುಖ್ಯಮಂತ್ರಿ ಸ್ಥಾನದ ಸನಿಹದಲ್ಲಿಯೇ ಇದ್ದಾರೆ. ಸಿಎಂ ಆದ ಮೇಲೆ ನಮ್ಮ ರಾಜ್ಯ ಮತ್ತು ರಾಮನಗರ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಕೆ.ಶೇಷಾದ್ರಿ, ಅಧ್ಯಕ್ಷ, ನಗರಸಭೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net