RSSಗೆ ಅಂಕುಶ, ಬೆಂಗ್ಳೂರು ಏರ್​ಪೋರ್ಟ್​ನಲ್ಲಿ ನಮಾಜ್: ಸರ್ಕಾರದ ಇಬ್ಬಗೆ ನೀತಿ ವಿರುದ್ಧ ಬಿಜೆಪಿ ಕಿಡಿ!

RSS
Published on

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS ​) ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ಗೊತ್ತೇ ಇದೆ. ಸಂಘದ ಪಥಸಂಚಲನಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಹೇರಿದ್ದು, ಪರೋಕ್ಷವಾಗಿ ಆರ್​ಎಸ್​ಎಸ್​ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪ ಗಟ್ಟಿಯಾಗಿ ಕೇಳಿಬರುತ್ತಿದೆ. ಆದರೆ, ಯಾವುದೇ ಸಂಘ-ಸಂಸ್ಥೆಗಳಾಗಲಿ ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೇ ಯಾವುದೇ ಚಟುವಟಿಕೆ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ. ಹೀಗೆ ವಾಗ್ವಾದ ಮುಂದುವರಿದಿದ್ದು, ಇದೀಗ ವೈರಲ್​ ಆಗುತ್ತಿರುವ ವಿಡಿಯೋವೊಂದು ಸರ್ಕಾರದ ವಿರುದ್ಧ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಒಳಗೆ ಜನರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವಾಗ ವಿಡಿಯೋ ಬೆಳಕಿಗೆ ಬಂತೋ ಕರ್ನಾಟಕದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ನಡೆದಿದೆ ಎನ್ನಲಾದ ಈ ಘಟನೆಯು ಕಾಂಗ್ರೆಸ್ ಸರ್ಕಾರ ಮತ್ತು ವಿಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಡುವಿನ ರಾಜಕೀಯ ಜಟಾಪಟಿಯಾಗಿ ಇದೀಗ ಮಾರ್ಪಟ್ಟಿದೆ.

ವರದಿಗಳ ಪ್ರಕಾರ, ವಿಡಿಯೋದಲ್ಲಿ ಕಾಣುತ್ತಿರುವರ ಜನರು ಮೆಕ್ಕಾಗೆ ತೆರಳುತ್ತಿದ್ದ ಪ್ರಯಾಣಿಕರ ಸಂಬಂಧಿಕರು ಎನ್ನಲಾಗಿದೆ. ಹೆಚ್ಚಿನ ಭದ್ರತೆ ಇರುವ ವಲಯದೊಳಗೆ ನಮಾಜ್​ ಮಾಡುತ್ತಿರುವ ದೃಶ್ಯವು ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದು ಕಾಂಗ್ರೆಸ್​ ಸರ್ಕಾರದ ತುಷ್ಟೀಕರಣ ರಾಜಕೀಯ ಎಂದು ವಿಪಕ್ಷ ನಾಯಕರುಗಳು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್, ಟರ್ಮಿನಲ್ ಒಳಗೆ ಇಂತಹ ಚಟುವಟಿಕೆಗೆ ಹೇಗೆ ಅನುಮತಿ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ T2 ಟರ್ಮಿನಲ್ ಒಳಗೆ ಈ ರೀತಿ ಮಾಡಲು ಹೇಗೆ ಅವಕಾಶ ನೀಡಲಾಗಿದೆ? ನಮಾಜ್​ ಮಾಡಲು ಅವರು ಪೂರ್ವಾನುಮತಿ ಪಡೆದಿದ್ದಾರೆಯೇ? ಎಂದು ಪ್ರಶ್ನಿಸಿರುವ ವಿಜಯ್​ ಪ್ರಸಾದ್​, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥ ಸಂಚಲನದ ವಿರುದ್ಧ ಕಾಂಗ್ರೆಸ್ ನಾಯಕರು ಎತ್ತಿರುವ ಆಕ್ಷೇಪಣೆಗಳನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿರುವ ವಿಜಯ್​ ಪ್ರಸಾದ್​, ಆಡಳಿತ ಪಕ್ಷವು ಇಬ್ಬಗೆ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್ ಸರಿಯಾದ ಅನುಮತಿಯೊಂದಿಗೆ ಪಥ ಸಂಚಲನ ನಡೆಸುತ್ತಿರುವಾಗ, ಸರ್ಕಾರ ಬೇಕಂತಲೇ ಆಕ್ಷೇಪಣೆಗಳನ್ನು ಎತ್ತುತ್ತದೆ. ಆದರೆ, ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡಿದಾಗ, ಯಾರೊಬ್ಬರು ಮಾತನಾಡುವುದಿಲ್ಲ. ಇದು ಗಂಭೀರ ಭದ್ರತಾ ಕಾಳಜಿಯನ್ನು ಉಂಟುಮಾಡುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಆರ್​ಆರ್​ಎಸ್​ ಅನ್ನು ವಿವಾದದ ಕೇಂದ್ರ ಬಿಂದುವಾಗಿ ಮಾಡಿದ ಐಟಿ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖುದ್ದಾಗಿ ಪತ್ರ ಬರೆದಿದ್ದ ಪ್ರಿಯಾಂಕ್​ ಖರ್ಗೆ, ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ರಾಜ್ಯಾದ್ಯಂತ ನಿಷೇಧ ಹೇರುವಂತೆ ಒತ್ತಾಯ ಮಾಡಿದ್ದರು. ಅಕ್ಟೋಬರ್‌ನಲ್ಲಿ ಬರೆದ ಪತ್ರದಲ್ಲಿ, ಆರ್‌ಎಸ್‌ಎಸ್ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ತನ್ನ ಶಾಖೆಗಳನ್ನು ನಡೆಸುತ್ತಿದೆ ಎಂದು ಗಂಭೀತ ಆರೋಪ ಮಾಡಿದ್ದರು. ಅವರ ಕೋರಿಕೆಯ ಮೇರೆಗೆ ಸರ್ಕಾರವು, ಖಾಸಗಿ ಸಂಘ-ಸಂಸ್ಥೆಗಳು ಯಾವುದೇ ಚಟುವಟಿಕೆಗಳಿಗೆ ಸರ್ಕಾರಿ ಸ್ವಾಮ್ಯದ ಆವರಣವನ್ನು ಬಳಸಲು ಪೂರ್ವಾನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿತು. ಆದಾಗ್ಯೂ, ಸರ್ಕಾರದ ಈ ನಿಯಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net