

ಪಾಂಡವಪುರ: ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ವಿಶ್ವಕ್ಕೆ ಹಲವು ಪ್ರಥಮಗಳನ್ನು ಪರಿಚಯಿಸಿದ ಮಹಾನ್ ಆಡಳಿತಗಾರರಾಗಿದ್ದರು. ಮೈಸೂರು ಸಂಸ್ಥಾನದ ಪ್ರಜೆಗಳ ಆಶಯಗಳನ್ನು ಉಸಿರಾಗಿಸಿಕೊಂಡು ಆಳ್ವಿಕೆ ನಡೆಸಿದರು ಎಂದು ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ತಿಳಿಸಿದರು.
ಪಟ್ಟಣದ ಕಸಾಪ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮೈಸೂರು ಸಂಸ್ಥಾನವನ್ನು ಆಳಿದ 10ನೇ ಚಾಮರಾಜ ಒಡೆಯರ್, 3ನೇ ಕೃಷ್ಣರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ಭಾಗದ ಜನತೆ ಎಂದಿಗೂ ಮರೆಯಬಾರದು. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಅವಿಸ್ಮರಣೀಯವಾದ ಕಾಲಘಟ್ಟವಾಗಿತ್ತು. ನಾಲ್ವಡಿಯವರು ಆಡಳಿತ, ಕೃಷಿ, ಶಿಕ್ಷಣ, ಔದ್ಯೋಗಿಕ, ಮೀಸಲಾತಿ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸುಧಾರಣೆ ತಂದು ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸುವಂತೆ ನೋಡಿಕೊಂಡರು ಎಂದು ಹೇಳಿದರು.
ಪ್ರಪಂಚದ ಅಂದಿನ ಶ್ರೀಮಂತ ರಾಜಮನೆತನಗಳಲ್ಲಿ ನಾಲ್ವಡಿ ಅವರು 7ನೇ ಸ್ಥಾನದಲ್ಲಿದ್ದರು. ದೇಶದಲ್ಲಿ ಜೀವ ವಿಮೆಯ ಬಗ್ಗೆ ಪರಿಕಲ್ಪನೆಯೇ ಇಲ್ಲದ ದಿನಗಳಲ್ಲಿಯೇ (1936) ಮೈಸೂರು ಇನ್ಶೂರೆನ್ಸ್ ಎಂಬ ಹೆಸರಿನ ಜೀವ ವಿಮೆ ಜಾರಿಗೆ ತಂದರು. ಹಿಂದುಳಿದ ವರ್ಗದವರಿಗೆ ಮೊದಲು ಮೀಸಲಾತಿ ಕಲ್ಪಿಸಿದರು. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಾಣಿ ವಿಲಾಸ ಶಾಲೆ ಆರಂಭಿಸಿ ದೇಶದಲ್ಲಿ ಮೊದಲ ಬಾರಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರಕಿಸಿಕೊಟ್ಟರು. ಮತದಾನದ ಹಕ್ಕು ನೀಡಿ ಮೊದಲ ಬಾರಿಗೆ ಮತದಾನ ನಡೆಸಿ 144 ಮಂದಿ ಕೌನ್ಸಿಲರ್ ಚುನಾಯಿಸಿದ್ದ ಮೊದಲ ರಾಜಸಂಸ್ಥಾನ. 1960ರಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಗೆ ತರುವುದರ ಜತೆಗೆ ಈ ಭಾಗದಲ್ಲಿ 18 ಲಕ್ಷ ಎಕರೆ ಪ್ರದೇಶವನ್ನು ಅರಣ್ಯ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದ ಪರಿಣಾಮವೇ ಈ ಭಾಗದಲ್ಲಿ ಕಾಡುಗಳು ಉಳಿದುಕೊಂಡಿದೆ. ಮೈಸೂರು ಸ್ಯಾಂಡಲ್ ಸೋಪು ತಯಾರಿಸುವುದರ ಜತೆಗೆ ಪ್ರಪಂಚದ ಹಲವು ದೇಶಗಳಿಗೆ ಶ್ರೀಗಂಧದ ಎಣ್ಣೆ ರಫ್ತು ಮಾಡುತ್ತಿದದ್ದು ನಮ್ಮ ಹೆಮ್ಮೆಯ ಮೈಸೂರು ಸಂಸ್ಥಾನ ಎಂದು ಬಣ್ಣಿಸಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರು-ಹಿರಿಯರು, ಪಾಲಕರನ್ನು ಗೌರವದಿಂದ ಕಂಡರೆ ವಿದ್ಯಾರ್ಥಿಗಳ ಬದುಕು ಸುಂದರವಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳ ಬಹುದು ಎಂದರು.
ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕಗಳಿಸಿದ ಶಾಲೆಗಳಿಗೆ, ಕನ್ನಡದಲ್ಲಿ 125ಕ್ಕೆ ಅಂಕಗಳಿಸಿದ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ 50 ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕಿನ ಹಿರೇಮರಳಿ ಗ್ರಾಮದ ಸಾಹಿತಿ ಶಂಕರಾನಂದ ಅವರು ಬರೆದ ‘ದೇವರು ಕಾಣೆಯಾದನು’ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಾಹಿತಿ ಚಂದ್ರಶೇಖರಯ್ಯ, ಉಪತಹಸೀಲ್ದಾರ್ ಎಸ್.ಸಂತೋಷ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಬಿಸಿಒ ಅನಿತಾ, ಪ್ರೌಢಶಾಲೆ ಸಹ ಶಿಕ್ಷಕ ಸಂಘದ ಅಧ್ಯಕ್ಷ ಕೇಶವಮೂರ್ತಿ, ಶಿಕ್ಷಕರ ಸಂಘದ ರಾಜ್ಯ ಸಂಘಟಕ ಕಾರ್ಯದರ್ಶಿ ಜಯರಾಮು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಇತರರು ಇದ್ದರು.