

ಮಾಗಡಿ: ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ ಎಂದು ಮಾಜಿ ಸಚಿವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದಲ್ಲಿ ಎಚ್.ಎಂ.ರೇವಣ್ಣ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ಜನ್ಮದಿನ ಮತ್ತು ಡಿ.ದೇವರಾಜ ಅರಸು ಅವರ 43ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಕನ್ನಡ ನಾಡಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರಲ್ಲಿ ಮೊದಲಿಗರು. ನಾಲ್ವಡಿ ಕೃಷ್ಣರಾಜ ಒಡೆಯರು ಹಾಕಿದ ಅಭಿವೃದ್ಧಿ ಅಡಿಪಾಯದ ಮೇಲೆ ಭವ್ಯಸೌಧ ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಗುರುತಿಸಿಕೊಂಡಿದೆ ಎಂದರು.
ಮೈಸೂರು ಸಾಬೂನು, ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭಿಸಿದರು. ತಳಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು, ಶಾಲಾ- ಕಾಲೇಜು ಆರಂಭಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದಿಗೂ ಜನಮಾನಸದಲ್ಲಿ ಮನೆ ಮಾಡಿರುವ ಮಹಾರಾಜರನ್ನು ಮರೆಯಲಾಗದು ಎಂದರು.
ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಡಿ.ದೇವರಾಜ ಅರಸು ಅವರ ಸಾಧನೆ ಅನನ್ಯವಾದುದು. ಉಳುವವನೇ ಭೂಮಿಯ ಒಡೆಯ, ಜೀತಪದ್ಧತಿ, ಮಲಹೊರುವ ಪದ್ಧತಿ, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿ, ವೃದ್ಧಾಪ್ಯವೇತನ ನೀಡುವ ಮೂಲಕ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದ್ದ ದೇವರಾಜ ಅರಸು ಆಡಳಿತ ವೈಖರಿಗೆ ಎಲ್ಲರಿಗೂ ಸ್ಫೂರ್ತಿ ತುಂಬಿದೆ ಎಂದರು.
ಕಾಲ್ತುಳಿತ ದುರಂತ ನಡೆಯಬಾರದಿತ್ತು. ಸರ್ಕಾರದ ಊಹೆಗೂ ಮೀರಿ ಅಭಿಮಾನಿಗಳು ಲಗ್ಗೆ ಹಾಕಿದ್ದರಿಂದ ಅನಾಹುತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ಕ್ರಮಕೈಗೊಂಡಿದ್ದಾರೆ. ಪೊಲೀಸರ ವೈಲ್ಯ ಮತ್ತು ಕ್ರಿಕೆಟ್ ಮಂಡಳಿ ಆಡಳಿತ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕೈಗೊಂಡು ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ ಎಂದರು.
ಅಗ್ನಿವಂಶ ತಿಗಳಗೌಡ ಸಮುದಾಯದ ಮುಖಂಡ ನಾಗರಾಜು ಮೊಗಣ್ಣ, ಸಾಹಿತಿ ಡಿ.ರಾಮಚಂದ್ರಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ಸುಮಗಂಗರೇವಣ್ಣ, ತುಮಕೂರು ಕನಕ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಎಸ್.ಜಿ.ರವೀಶ್, ಕುರುಬರ ಸಂಘದ ಕಾರ್ಯದರ್ಶಿ ಎಚ್.ಶಿವಕುಮಾರ್, ಮುಖಂಡ ತೇಜಸ್ ಕುವರ್, ತಾಲೂಕು ಮಾಚಿದೇವ ಮಡಿವಾಳರ ಸಂಘದ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್, ಸಾಹಿತಿ ದೊಡ್ಡಬಾಣಗೆರೆಮಾರಣ್ಣ ಮಾತನಾಡಿದರು.
ನಟ ಅನೂಪ್ ರೇವಣ್ಣ, ವತ್ಸಲಾರೇವಣ್ಣ, ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಪ್ರಸನ್ನಗೌಡ, ಜಿಲ್ಲಾಧ್ಯಕ್ಷ ಆನಂದ್, ಪತ್ರಕರ್ತ ಎಂ.ಎಸ್. ಸಿದ್ದಲಿಂಗೇಶ್ವರ್, ರೂಪೇಶ್, ಹೊಂಬಾಳಮ್ಮನಪೇಟೆ ಗಂಗರೇವಣ್ಣ, ಹನುಮಯ್ಯ, ಕುಂಚಿಟಿಗರ ಸಂಘದ ಜಯಕುಮಾರ್, ಆರ್ಯ ಈಡಿಗರ ಸಂಘದ ಮೋಹನ್ ಕುಮಾರ್, ರಾಜಣ್ಣ, ಲಕ್ಷ್ಮಮ್ಮ ಮಾಗಡಯ್ಯ ಸೇವಾಸಮಿತಿ ಮತ್ತು .ಎಚ್.ಎಂ.ರೇವಣ್ಣ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಇದ್ದರು.