'ಎರಡೂ ಕ್ಷೇತ್ರಗಳಲ್ಲೂ ಶತಾಯಗತಾಯ ಗೆಲ್ಲುತ್ತೇವೆ...'

State 1 Nalin kumar Katil
Published on

ದಾವಣಗೆರೆ : ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಶತಾಯಗತಾಯ ಗೆಲ್ಲಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದರು.

ಇತ್ತೀಚೆಗೆ ನಿಧನರಾದ ಬಿಜೆಪಿ ಮುಖಂಡ ಡಾ. ಮಂಜುನಾಥ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆಯ ಪೂರ್ವತಯಾರಿಗಳು ನಡೆಯುತ್ತಿವೆ. ಮತಗಟ್ಟೆ, ಶಕ್ತಿಕೇಂದ್ರಗಳ ಸಿದ್ಧತೆಯಾಗುತ್ತಿದೆ. ಐದಾರು ಜನ ಆಕಾಂಕ್ಷಿಗಳಿದ್ದು ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.

ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಕುಟುಂಬದವರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಕುಟಂಬದವರು ದುಃಖದಲ್ಲಿದ್ದಾರೆ. ಇದು ಅವರಿಗೆ ಸಾಂತ್ವನ ಹೇಳುವ ಸಮಯವಾಗಿದ್ದು, ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿ, ರಾಜ್ಯದಲ್ಲಿ ಈಗ ಗೋಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹಟ್ಟಿಯಿಂದ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿತ್ತು. ಮನೆಗಳಿಗೆ ಬಂದು ತಲ್ವಾರ್ ತೋರಿಸುತ್ತಿದ್ದರು. ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಶೃಂಗೇರಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಗಿತ್ತು ಎಂದು ನೆನಪಿಸಿದರು. ಇದನ್ನೂ ಓದಿ: ಇಂಡಿಯಾ ಗೇಟ್​​ ಬಳಿ ಟ್ರ್ಯಾಕ್ಟರ್​​ಗೆ ಬೆಂಕಿ: ಯುವ ಕಾಂಗ್ರೆಸ್ ಅಧ್ಯಕ್ಷನ ಬಂಧನ

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆ ವಿಚಾರ ರಾಜ್ಯಪಾಲರ ಮುಂದೆಯೂ ಹೋಗಿತ್ತು, ಸಿದ್ದರಾಮಯ್ಯ ಸರ್ಕಾರ ಬಂದ ನಂತರ ತೆಗೆದು ಹಾಕಿದರು ಎಂದು ಹೇಳಿದರು.

ಕಾಯ್ದೆ ಜಾರಿಗೆ ಬದ್ಧರಾಗಿದ್ದೇವೆ. ನಾವು ಹೇಳಿದ್ದನ್ನು ಮಾಡುತ್ತೇವೆ, ಸ್ವಲ್ಪ ಕಾದು ನೋಡಿ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಬೀದರ್ ಸಂಸದ ಭಗವಂತ ಖೂಬಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net