

ಬೆಂಗಳೂರು: ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬರು ನುಂಗಿದ್ದ ನೈಲ್ ಕಟ್ಟರ್ ಅನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ನಗರದ ಸರ್ಜಾಪುರ ನಿವಾಸಿಯಾಗಿರುವ 40 ವರ್ಷದ ವ್ಯಕ್ತಿ, 8 ವರ್ಷಗಳ ಹಿಂದೆ ಮದ್ಯದ ಅಮಲಿನಲ್ಲಿ ನೈಲ್ ಕಟ್ಟರ್ ನುಂಗಿದ್ದರು. ಆದರೆ ಇತ್ತೀಚೆಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಹೊಟ್ಟೆಯ ನೋವಿನಿಂದಾಗಿ ಸ್ಥಳೀಯ ಕ್ಲಿನಿಕ್‌ನಲ್ಲಿ ತಪಾಸಣೆಗೆ ಹೋದ ಸಂದರ್ಭದಲ್ಲಿ ವೈದ್ಯರು ಸ್ಕ್ಯಾನ್ ಮಾಡಿಸಲು ಸೂಚಿಸಿದ್ದರು. ಇದರಿಂದ ಹೊಟ್ಟೆಯಲ್ಲಿ ಸಾಧನವೊಂದು ಇರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಡಾ. ಯು. ಲೋಹಿತ್ ನೇತೃತ್ವದ ವೈದ್ಯರ ತಂಡ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ ನೈಲ್ ಕಟ್ಟರ್ ಹೊರತೆಗೆದಿದೆ.
ವ್ಯಕ್ತಿಗೆ ಹೊಟ್ಟೆಯ ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಅಗತ್ಯ ವೈದ್ಯಕೀಯ ತಪಾಸಣೆ ನಡೆಸಿ ಸಮಸ್ಯೆ ಪತ್ತೆ ಹಚ್ಚಲಾಯಿತು. ಈ ಹಿಂದೆ ಅವರಿಗೆ ಹೊಟ್ಟೆಯ ಭಾಗದಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆದಿತ್ತು. ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆದ ಎರಡು ದಿನಗಳ ನಂತರ ಮನೆಗೆ ತೆರಳಿದ್ದಾರೆ ಎಂದು ಡಾ. ಲೋಹಿತ್ ಮಾಹಿತಿ ನೀಡಿದ್ದಾರೆ.