ಸಹಬಾಳ್ವೆಗೆ ಸಾಕ್ಷಿ ನಾಗೋಹಳ್ಳಿ

Nagohalli Gramayana
Published on

| ಅರ್ಕಾವತಿ ನದಿ ಪ್ರಕೃತಿ ಮಧ್ಯೆಇರುವ ವಿಶೇಷ ಗ್ರಾಮ | ಬ್ರಿಟಷರ ಕಾಲದಲ್ಲೇ ಶಾಲೆ ಹೊಂದಿದ್ದ ಗ್ರಾಮ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಬಾನೆತ್ತರದ ದಟ್ಟಾರಣ್ಯದ ಬೆಟ್ಟ, ಕೆಳಭಾಗದಲ್ಲಿ ಝುಳು ಝುಳು ಸಂಗೀತದ ಅಲೆಯ ಸದ್ದು ಮಾಡುತ್ತಾ ಹರಿಯುವ ಅರ್ಕಾವತಿ ನದಿ. ಇವೆರಡರ ಮಧ್ಯೆ ಸುಂದರ ಪ್ರಕೃತಿ ಹಸಿರು ಹೊದ್ದಂತಿರುವುದೇ ನಾಗೋಹಳ್ಳಿ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ನಾಗೋಹಳ್ಳಿ ತನ್ನದೇ ಆದ ಪ್ರಕೃತಿ ಶ್ರೀಮಂತಿಕೆ ಹೊಂದಿದೆ. ಧಾರ್ಮಿಕ, ಕೃಷಿ ಪ್ರಧಾನ, ರಾಜಕೀಯವಾಗಿಯೂ ಗುರ್ತಿಸಿಕೊಂಡು ಜಿಕ್ಕ ಪ್ರಮುಖ ಕಂದಾಯ ಗ್ರಾಮವಾಗಿ ಗುರ್ತಿಸಿಕೊಂಡಿದೆ. ಬ್ರಿಟಷರ ಕಾಲದಲ್ಲೇ ಶಾಲೆಗಳನ್ನು ಹೊಂದಿದ್ದ ಗ್ರಾಮವಿದು. ಹೆಚ್ಚು ಕೃಷಿಕರನ್ನು ಹೊಂದಿರುವ ನಾಗೋಹಳ್ಳಿ ರಾಮನಗರ ಮತ್ತು ಕನಕಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಸರ್ವ ಜನರ ಸಹಬಾಳ್ವೆಗೆ ಸಾಕ್ಷಿಯಾಗಿದೆ. ಜಿಲ್ಲಾ ಕೇಂದ್ರದಿಂದ 9 ಕಿ.ಮೀ ಅಂತರದಲ್ಲಿದ್ದು, ಸುಮಾರು 900 ಜನಸಂಖ್ಯೆ ಹೊಂದಿದೆ. 450 ಮತದಾರರಿದ್ದಾರೆ. ಕಂದಾಯ ಗ್ರಾಮವಾಗಿರುವ ನಾಗೋಹಳ್ಳಿಗೆ ವಡ್ಡರಹಳ್ಳಿ, ಗುನ್ನೂರು, ಜವಳಗೆರೆದೊಡ್ಡಿ, ಮೂಡ್ಲಳ್ಳಿದೊಡ್ಡಿ ಸೇರುತ್ತವೆ.

ಮೊದಮೊದಲು ಗರಿ ಶೆಡ್, ನಾಡು ಹೆಂಚು ಮನೆಗಳು, ಮಣ್ಣಿನ ಬೀದಿಗಳಿಂದ ಕೂಡಿದ್ದ ಗ್ರಾಮ ಅಭಿವೃದ್ಧಿಯತ್ತ ಮುನ್ನುಗ್ಗಿ ಇಂದು ಕಾಂಕ್ರೀಟ್ ಮನೆಗಳು, ಕಾಂಕ್ರೀಟ್ ರಸ್ತೆ, ಡಾಂಬರು ರಸ್ತೆಗಳಲ್ಲಿ ಎದ್ದು ಕಾಣುತ್ತಿದೆ.

ಹೈನುಗಾರಿಕೆಯಲ್ಲಿ ಮುಂದೆ:

ಅರ್ಕಾವತಿಯನ್ನು ಒಡಲಲ್ಲಿಟ್ಟುಕೊಂಡಿರುವ ನಾಗೋಹಳ್ಳಿ ಜಾನುವಾರುಗಳಿಗೆ ಅಗತ್ಯವಾದ ಮೇವು ಬೆಳೆಗೆ ಸಹಕಾರಿಯಾಗಿದೆ. ಶೇ.80 ಜನ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಗ್ರಾಮ ಪ್ರತಿದಿನ ಸುಮಾರು 1300 ಲೀಟರ್ ಹಾಲು ಉತ್ಪಾದಿಸುತ್ತದೆ.

ನಿಂತ ಶಾಲೆ

ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಶಾಲೆ ಸ್ಥಾಪನೆಯಾಗಿ ಮಾರಮ್ಮ ದೇವಾಲಯದ ಒಳ ಆವರಣದಲ್ಲಿ ನಡೆಯುತ್ತಿತ್ತು. ನಂತರ 1955ರಲ್ಲಿ ಸರ್ಕಾರಿ ಶಾಲೆಗೆ ಸ್ವಂತ ಕಟ್ಟಡ ಕಟ್ಟಲಾಯಿತು. 1 ರಿಂದ 5 ನೇ ತರಗತಿವರೆಗೆ ಬಹಳ ವರ್ಷಗಳಿಂದಲೂ ಪ್ರಾಥಮಿಕ ಶಾಲೆ ನಡೆಯುತ್ತಿತ್ತು. ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಶಾಲೆಯನ್ನು ಕಳೆದ ಎರಡು ವರ್ಷದ ಹಿಂದೆ ಮುಚ್ಚಲಾಗಿದೆ. ಈಗ ಮಕ್ಕಳು ಪಕ್ಕದ ಕೈಲಾಂಚ, ಗೌಡಯ್ಯನದೊಡ್ಡಿ, ಅವ್ವೇರಹಳ್ಳಿ ಗ್ರಾಮಗಳ ಶಾಲೆಗೆ ಹೋಗುತ್ತಿದ್ದಾರೆ. ಅಂಗನವಾಡಿ ಕೇಂದ್ರ ಗ್ರಾಮದಲ್ಲಿದೆ.

ದೇವಾಲಯಗಳು

ಆಂಜನೇಯ, ಮಾರಮ್ಮ, ಶನೈಶ್ವರ, ಮಹದೇಶ್ವರ ದೇವಾಲಯಗಳಿವೆ. ಪ್ರತಿವರ್ಷ ಆಯುಧ ಪೂಜೆಯಲ್ಲಿ ಗ್ರಾಮದೇವರ ಹಬ್ಬ ನಡೆಯುತ್ತದೆ. ಶಿವರಾತ್ರಿ ಹಬ್ಬದಲ್ಲಿ ಶನೈಶ್ವರ ಪರ ಮಾಡಲಾಗುತ್ತದೆ.

5 ಅಥವಾ 7 ವರ್ಷಕ್ಕೆ ಗ್ರಾಮದಲ್ಲಿ ಅದ್ದೂರಿ ಮಾರಿಹಬ್ಬ ಅಗ್ನಿಕೊಂಡ ನಡೆಯುತ್ತದೆ. ಹಬ್ಬಕ್ಕೆ ಮೂರು ದಿನ ಮುಂಚಿತವಾಗಿ ಆಂಜನೇಯ ದೇವರಿಗೆ ಪರ ಮಾಡಲಾಗುತ್ತದೆ. ರೇವಣಸಿದ್ದೇಶ್ವರ ಬೆಟ್ಟಕ್ಕೆ ಹೋಗಿ ರೇವಣಸಿದ್ದೇಶ್ವರ ವೀರಭದ್ರಸ್ವಾಮಿ, ರೇಣುಕಾಂಬಾ ದೇವರನ್ನು ಪೂಜಿಸಿ ಬಂದು ನಂತರ ಮಾರಮ್ಮ ದೇವರ ಅಗ್ನಿಕೊಂಡ ನಡೆಸಿ ಅದ್ದೂರಿಯಾಗಿ ಹಬ್ಬ ಮಾಡಲಾಗುತ್ತದೆ.

ಕಾಡು ಪ್ರಾಣಿಗಳ ಕಾಟ

ಗ್ರಾಮದ ಪಕ್ಕವೇ ಹಂದಿಗೊಂದಿ ಅರಣ್ಯ ಪ್ರದೇಶವಿದ್ದು, ಚಿರತೆ, ಕರಡಿ, ಕಾಡುಹಂದಿ, ಆನೆಗಳ ಉಪಟಳವಿದೆ. ತೆಂಗಿನಕಲ್ಲು ಅರಣ್ಯಕ್ಕೆ ಕಾವೇರಿ ವನ್ಯಜೀವಿಧಾಮದಿಂದ ಬರುವ ಆನೆಗಳು ಹಂದಿಗೊAದಿ ಅರಣ್ಯ ಸೇರಲು ನಾಗೋಹಳ್ಳಿ ಮಾರ್ಗವಾಗಿ ಹೋಗುವಾಗ ಮತ್ತು ತೆಂಗಿನಕಲ್ಲು ಅರಣ್ಯ ಸೇರುವ ಸಮಯದಲ್ಲಿ ರೈತರ ಫಸಲು ನಾಶ ಮಾಡಿ ಹೋಗುತ್ತಿವೆ. ಜತೆಗೆ ಇತ್ತೀಚೆಗೆ ಎಳನೀರಿಗಾಗಿ ಕೋತಿಗಳು ತೆಂಗಿನತೋಟಕ್ಕೆ ಲಗ್ಗೆ ಇಡುತ್ತಿವೆ. ಕೋತಿಗಳ ಕಾಟವೂ ಹೆಚ್ಚಿದೆ ಎನ್ನುತ್ತಾರೆ ಗ್ರಾಮಸ್ಥರು.

ರೇಷ್ಮೆ, ಮಾವು, ತೆಂಗು

ಮಾವು, ರೇಷ್ಮೆ, ತೆಂಗನ್ನು ವಾಣಿಜ್ಯ ಬೆಳೆಯಾಗಿಸಿಕೊಂಡು ಹಲವು ರೈತರು ಆರ್ಥಿಕ ಪರಿಸ್ಥಿತಿ ಉತ್ತಮ ಮಾಡಿಕೊಂಡಿದ್ದಾರೆ. ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ನಡಕೇಗೌಡನಕೆರೆ ಕೆಳ ಭಾಗದಲ್ಲಿ ಹರಿಯುವ ಅರ್ಕಾವತಿ ನದಿ ಅಂತರ್ಜಲ ರಕ್ಷಣೆಗೆ ಪ್ರಮುಖ ಪಾತ್ರ ವಹಿಸಿದ್ದು, ರೈತರ ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ನೀಗಿಸಿ ರೈತರ ಜಮೀನು ಸದಾ ಹಸಿರಾಗಿರಲು ಸಹಕಾರಿಯಾಗಿವೆ.

ವರದಾನವಾದ ಸೇತುವೆ

ಕೈಲಾಂಚ ಗೇಟ್ ಮತ್ತು ನಾಗೋಹಳ್ಳಿಗೆ ಸಂಪರ್ಕ ಕಲ್ಪಿಸಲು ಈ ಹಿಂದೆ ಆಗಿರಲಿಲ್ಲ. ನದಿ ಅಂಚಿನಲ್ಲೇ ರಾಮನಗರದ ಕಡೆ ಬರಬೇಕಿತ್ತು. ನದಿಯಲ್ಲಿ ನೀರು ಕಡಿಮೆಯಾದಾಗ ಮಾತ್ರ ನಡೆದಾಡಬೇಕಿತ್ತು. ನದಿಗೆ ಅಡ್ಡಲಾಗಿ ಸೇತುವೆ ಆದ ನಂತರ ಜನರ ಓಡಾಟಕ್ಕೆ ಅನುಕೂಲವಾಗಿದ್ದು, ಗ್ರಾಮದ ಜನರು ಕೈಲಾಂಚ ಗೇಟ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು, ವಾಣಿಜ್ಯ ಮಳಿಗೆ ಕಟ್ಟಿ ವ್ಯಾಪಾರ ನಡೆಸಲು ಸೇತುವೆ ವರದಾನವಾಗಿದೆ.

ನಾಗೋಹಳ್ಳಿ ಗ್ರಾಮ ಧಾರ್ಮಿಕ, ಶೈಕ್ಷಣಿಕವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಬ್ರಿಟೀಷರ ಕಾಲದಿಂದಲೂ ಗ್ರಾಮ ಕಂದಾಯ ಗ್ರಾಮವಾಗಿದೆ. ಜತೆಗೆ ಸುತ್ತಲೂ ಹಚ್ಚ ಹಸಿರಿನ ಮಧ್ಯೆ ಸುಂದರ ಪರಿಸರದಲ್ಲಿರುವ ಗ್ರಾಮವಾಗಿದ್ದು, ಅರ್ಕಾವತಿ ನದಿ ಗ್ರಾಮದ ಜೀವನದಿಯಾಗಿದೆ. ಹಸಿರು ಕೀರೀಟ ತೊಡಿಸಿ ಹೈನುಗಾರಿಕೆ, ಕೃಷಿ ನಡೆಸುವ ರೈತರಿಗೆ ವರದಾನವಾಗಿದೆ ಇಂತಹ ಗ್ರಾಮದಲ್ಲಿ ಜನಿಸಿರುವ ನಾವೇ ಧನ್ಯರು.| ಎನ್.ಎಸ್. ಲಿಂಗೇಗೌಡ, ಹಾಲಿನ ಡೇರಿ ಉಪಾಧ್ಯಕ್ಷರು, ನಾಗೋಹಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net