ಕಲೆಗಳ ತವರೂರು ನಾಗವಾರ

Published on

ಸಾಂಸ್ಕೃತಿ, ಶೈಕ್ಷಣಿಕ, ಸಾಮಾಜಿಕವಾಗಿ ಮುಂಚೂಣಿ
*ಸಹಬಾಳ್ವೆಗೆ ಹೆಸರುವಾಸಿ
ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕಿನಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ಗ್ರಾಮವೆಂಬ ಖ್ಯಾತಿಗೆ ನಾಗವಾರ ಪಾತ್ರವಾಗಿದೆ. ಕಲೆಗಳ ತವರೂರು ಎನಿಸಿಕೊಂಡಿರುವ ಈ ಗ್ರಾಮ ತಾಲೂಕಿನ ಅತಿದೊಡ್ಡದು ಎಂಬುದು ವಿಶೇಷ.

ಹೌದು. ತಾಲೂಕು ಕೇಂದ್ರದಿಂದ ಸುಮಾರು 8 ಕಿಮೀ ದೂರವಿರುವ ನಾಗವಾರ ತಾಲೂಕಿನ ವಿಶಿಷ್ಟ ಗ್ರಾಮಗಳ್ಲೊಂದು. ವಿಸ್ತೀರ್ಣದಲ್ಲಿ ಚಿಕ್ಕದಾದರೂ ಅತಿಹೆಚ್ಚು ಜನಸಂಖ್ಯೆ ಪ್ರಾಬಲ್ಯ ಹೊಂದಿರುವುದು ವಿಶೇಷ. ಮಾಕಳಿ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಈ ಗ್ರಾಮ ಹಲವು ಕಾರಣಗಳಿಂದ ತಾಲೂಕಿನಲ್ಲಿ ತನ್ನದೇ ಆದ ಹೆಗ್ಗುರುತು ಹೊಂದಿದೆ.

ಸುಮಾರು 4 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದೆ. ಗಣನೀಯವಾಗಿರುವ ಒಕ್ಕಲಿಗ ಸಮುದಾಯದೊಂದಿಗೆ ಇನ್ನುಳಿದ ಜಾತಿ ಜನಾಂಗಗಳೂ ಗ್ರಾಮದಲ್ಲಿ ಸಹಬಾಳ್ವೆಯ ಜೀವನ ಸಾಗಿಸುತ್ತಿವೆ.

ಈ ಗ್ರಾಮಕ್ಕೆ ನಾಗವಾರ ಎಂಬ ಹೆಸರು ಯಾವ ಕಾರಣಕ್ಕೆ ಬಂತು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಈ ಗ್ರಾಮಕ್ಕೆ ಪುರಾತನ ಹಿನ್ನೆಲೆಯಿದೆ. ಗ್ರಾಮದಲ್ಲಿರುವ ಕೆರೆ ಇಡೀ ತಾಲೂಕಿಗೆ ಪ್ರಥಮವಾದದ್ದು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕೆರೆಗೆ ಹಿರಿಕೆರೆ ಎಂದು ಕರೆಯುತ್ತಾರೆ. ತಾಲೂಕಿನಲ್ಲಿ ರಾಜಕೀಯವಾಗಿಯೂ ಈ ಗ್ರಾಮ ಛಾಪು ಮೂಡಿಸಿದೆ. ಪ್ರಜಾ ಸೋಶಿಯಲಿಸ್ಟ್​ ಪಾರ್ಟಿಯ ರಾಜ್ಯಮಟ್ಟದ ಸಮಾವೇಶವೊಂದನ್ನು ಈ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದೇ ಗ್ರಾಮದ ರಾಜಕೀಯ ಇತಿಹಾಸಕ್ಕೆ ಸಾಕ್ಷಿ ಎನ್ನಬಹುದು.

ಇನ್ನೂ ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮದಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, ಉರ್ದು ಶಾಲೆ, ಪ್ರಾರ್ಥನಾ ಕೇಂದ್ರವೂ ಇತ್ತು ಎನ್ನಲಾಗಿದೆ. ಈ ಹಿಂದೆ ಈ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗ್ರಾಮ ಗುರುತಿಸಿಕೊಂಡಿತ್ತು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಶಿವರಾಮೇಗೌಡ ನಾಗವಾರ.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆವೀಡು!

ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಗ್ರಾಮದ ಜನರ ಆರಾಧ್ಯ ದೈವವಾಗಿದೆ. ಇದೊಂದು ಪುರಾತನ ದೇವಾಲಯವಾಗಿದೆ. ಇದರೊಂದಿಗೆ, ಮಾರಮ್ಮ, ಗಣಪತಿ, ಬಸವೇಶ್ವರ, ಉಡಸಲಮ್ಮ, ಮಂಚಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಮುತ್ತಪ್ಪ, ಪಟ್ಲದಮ್ಮ, ಹುಚ್ಚಮ್ಮ ಸೇರಿ 25ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಒಂದೊಂದು ಪೈಕಿಗಳಿಗೂ ಒಂದೊಂದು ದೇವಾಲಯಗಳಿರುವುದು ವಿಶೇಷ. ಪ್ರತಿವರ್ಷ ಪುಷ್ಪ ಬೃಂದಾವನೋತ್ಸವ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.

ವೀಳ್ಯದೆಲೆ ತವರೂರು!

ನಾಗವಾರ ಗ್ರಾಮ ವೀಳ್ಯದೆಲೆಯ ತವರೂರು ಎಂಬ ಖ್ಯಾತಿ ಹೊಂದಿದೆ. ಗ್ರಾಮದಲ್ಲಿ ವೀಳ್ಯದೆಲೆ ಬಹುಮುಖ್ಯ ಬೆಳೆಯಾಗಿದ್ದು, ಅನಾದಿಕಾಲದಿಂದಲೂ ಈ ಬೆಳೆ ಇಲ್ಲಿನ ಜನರ ಬದುಕಿನ ಭಾಗವಾಗಿದೆ. ಈ ಗ್ರಾಮದಲ್ಲಿ ಬಹುತೇಕ ಮಂದಿ ತುಂಡು ಭೂಮಿ ಹೊಂದಿದ್ದು, ಅವರೆಲ್ಲರೂ ವೀಳ್ಯದೆಲೆಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಬೆಳೆಯುವ ಎಲೆಗೆ ಸಾಕಷ್ಟು ಮಾರುಕಟ್ಟೆಯೂ ಇದೆ. ಜತೆಗೆ ಇನ್ನಿತರ ವ್ಯವಸಾಯ ಹಾಗೂ ಹೈನುಗಾರಿಕೆ ಈ ಗ್ರಾಮದ ಜನರ ಆರ್ಥಿಕ ಬೆನ್ನುಲುಬಾಗಿದೆ.

ಕಲೆಗಳ ಹುಟ್ಟೂರು!

ಹಲವು ವರ್ಷಗಳಿಂದ ವಿವಿಧ ಕಲಾಪ್ರಕಾರಗಳನ್ನು ಜೋಪಾನದಿಂದ ಕಾಪಾಡಿಕೊಂಡು ಬಂದಿರುವ ಕೀರ್ತಿ ಈ ಗ್ರಾಮಸ್ಥರಿಗಿದೆ. ಗ್ರಾಮದಲ್ಲಿ ರಂಗಭೂಮಿ ನಿರ್ದೇಶಕರು ಹಾಗೂ ಕಲಾವಿದರನ್ನು ಕಾಣಬಹುದು. ಪಟ್ಟದ ಕುಣಿತ, ಪೂಜಾ ಕುಣಿತ, ಕೋಲಾಟ, ಭಾಗವಂತಿಕೆ ಮೇಳ, ವೀರಗಾಸೆ, ಪಾಳೇಗಾರ ವೇಷ ಸೇರಿ ಕಲೆಗಳನ್ನು ಈ ಗ್ರಾಮದಲ್ಲಿ ಕಾಣಬಹುದಾಗಿದೆ. ಗ್ರಾಮದ ದಿ. ಮೊಡ್ಡೆ ಶಿವಲಿಂಗಯ್ಯ ಎಂಬುವವರು ಪೂಜಾ ಕುಣಿತವನ್ನು ನಾಡಿಗೆ ಪಸರಿಸಿದ ಕೀರ್ತಿ ಹೊಂದಿದ್ದಾರೆ. ರಂಗಭೂಮಿ, ಭಜನೆ ಹಾಗೂ ಸೋಬಾನೆ ಕಲಾವಿದರೂ ಈ ಗ್ರಾಮದಲ್ಲಿದ್ದಾರೆ.

ಕೋಲಾಟ, ಪಟ್ಟದ ಕುಣಿತ, ಬಯಲು ನಾಟಕ, ಯಕ್ಷಗಾನ ಕಲಾಪ್ರದರ್ಶನ ಸೇರಿ ವಿವಿಧ ಕಲಾ ಪ್ರದರ್ಶನಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ಮಾಡಿರುವ ಕೀರ್ತಿ ಇಲ್ಲಿನ ಕಲಾವಿದರಿಗಿದೆ. ಬೇರೆ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ಜಾನಪದ ಕಲೆಗಳ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಮಾಶಾಸನ ಪಡೆಯುವ ಕಲಾವಿದರ ಸಂಖ್ಯೆ ಹೆಚ್ಚಾಗಿರುವುದು ಇದು ಕಲಾವಿದರ ಗ್ರಾಮ ಎನ್ನಲೂ ಒಂದು ಉದಾಹರಣೆ ಎನ್ನುತ್ತಾರೆ ರಂಗಭೂಮಿ ಕಲಾವಿದ ಎಂ.ಎನ್​.ಶಂಭೂಗೌಡ, ನಿವೃತ್ತ ಶಿಕ ಎನ್​.ಎಸ್​.ನಾಗರಾಜು.

ವಿದ್ಯಾವಂತರ ಗ್ರಾಮ!


ನಾಗವಾರ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಗ್ರಾಮದಲ್ಲಿ ಶಾಲಾ-ಕಾಲೇಜುಗಳಿವೆ. ವಿದ್ಯಾವಂತರು ಹೆಚ್ಚಾಗಿದ್ದು, ಶಿಕ್ಷಕರು ಸೇರಿ ವಿವಿಧ ಕ್ಷೇತ್ರದಲ್ಲಿ ಗ್ರಾಮದವರು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿರುವ ಸಾರ್ವಜನಿಕ ಸಂಸ್ಥೆ ಗ್ರಾಮದ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದೆ. ಹೆಸರಾಂತ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಸೇರಿ ಹಲವರು ಗ್ರಾಮದ ಛಾಪು ಹರಡಿದ್ದಾರೆ. ಗ್ರಾಮದಲ್ಲಿ ಯಜಮಾನಿಕೆ ಹಾಗೂ ನ್ಯಾಯಪದ್ಧತಿ ಇಂದಿಗೂ ರೂಢಿಯಲ್ಲಿದೆ. ಕೇರಿ ಯಜಮಾನರು ಹಾಗೂ ಊರಿನ ಯಜಮಾನರು ಗ್ರಾಮದ ಒಳಿತಿಗಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net