

ಬೆಂಗಳೂರು: ನಮ್ಮ ಮೆಟ್ರೋ ರೈಲು ಹಸಿರು ಮಾರ್ಗದಲ್ಲಿ ನಾಗಸಂದ್ರ& ಮಾದಾವರ ನಡುವಿನ 3.7 ಕಿ.ಮೀ ಅಂತರದ ಮೆಟ್ರೋ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜುಲೈ ಅಂತ್ಯದಿಂದ ವಾಣಿಜ್ಯ ಸೇವೆ ಆರಂಭಗೊಳ್ಳುವ ನಿರೀೆಯಿದೆ.
ನಾಗಸಂದ್ರದಿಂದ 3.7 ಕಿ.ಮೀ. ಹಸಿರು ಮಾರ್ಗದ ವಿಸ್ತರಣೆಯ ಕಾಮಗಾರಿ 2017ರಲ್ಲಿ ಆರಂಭಗೊಂಡಿತು. ಬಿಎಂಆರ್ಸಿಎಲ್ ಕಾಮಗಾರಿಯನ್ನು 2019ರಲ್ಲಿ ಪೂರ್ಣಗೊಳಿಸಿ, ವಿಸ್ತರಿತ ಸೇವೆ ಆರಂಭಿಸಲು ಯೋಚಿಸಿತ್ತು. ಆದರೆ ಭೂಸ್ವಾಧಿನ ಪ್ರಕ್ರಿಯೆ ವಿಳಂಬ ಹಾಗೂ ಲಾಕ್ಡೌನ್ ಕಾರಣದಿಂದ ಕಾಮಗಾರಿಗೆ ಹಿನ್ನಡೆ ಉಂಟಾಯಿತು.ವಿಸ್ತರಿತ ಮಾರ್ಗವನ್ನು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ವಿಸ್ತರಿತ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ನಿಲ್ದಾಣಗಳ ಒಳಗೆ ಪೇಂಟಿಂಗ್, ಗ್ರಾನೈಟ್ ಕಲ್ಲುಗಳ ಅಳವಡಿಕೆ, ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್ ಕೆಲಸಗಳು ಅಂತಿಮ ಹಂತದಲ್ಲಿವೆ. ಸದ್ಯದಲ್ಲೇ ಈ ಕೆಲಸಗಳು ಪೂರ್ಣಗೊಳ್ಳಲಿದ್ದು, ಬಳಿಕ ವಿವಿಧ ಪರೀೆಗಳನ್ನು ನಡೆಸಲಾಗುತ್ತದೆ. ಜುಲೈ ಅಂತ್ಯದಿಂದ ಮೆಟ್ರೋ ರೈಲು ಸೇವೆ ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಸ್ತರಿತ ಮಾರ್ಗದ ಕಾಮಗಾರಿ ಆರಂಭದಿಂದಲೂ ಸಾಕಷ್ಟು ಹಿನ್ನಡೆಗಳನ್ನು ಎದುರಿಸಿವೆ. ಕಾಮಗಾರಿ ಅಂತಿಮ ಹಂತದಲ್ಲಿರುವ ಸಂದರ್ಭ ಚುನಾವಣೆ ಕಾರಣಕ್ಕೆ ಮಾರ್ಚ್ನಿಂದ ಕಾರ್ಮಿಕರ ಅಲಭ್ಯತೆ ಎದುರಾಗಿತ್ತು. ಹೀಗಾಗಿ ಮಾರ್ಚ್ಗೆ ಮುಗಿಯಬೇಕಿದ್ದ ಕೆಲಸಗಳು ಬಾಕಿ ಉಳಿದವು. ಜತೆಗೆ ಕಚ್ಚಾ ವಸ್ತುಗಳನ್ನು ಪೂರೈಸಲು ಗುತ್ತಿಗೆ ಪಡೆದಿದ್ದ ಕಂಪನಿ ಉತ್ಪನ್ನಗಳನ್ನು ಪೂರೈಸದ ಪರಿಣಾಮ ಒಪ್ಪಂದ ರದ್ದುಗೊಂಡಿತು. ಬಳಿಕ ನೈಸ್ ರಸ್ತೆಯ ಮೇಲೆ ಮಾರ್ಗ ನಿರ್ಮಿಸಲು 67.65 ಲಕ್ಷ ರೂ. ಪಾವತಿಸಿ ಅನುಮತಿ ಪಡೆಯಬೇಕಾಗಿ ಬಂತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿವರಿಸಿದ್ದಾರೆ.
ಹಸಿರು ಮಾರ್ಗದಲ್ಲಿ ಸದ್ಯ 29 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ವಿಸ್ತರಿತ ಮಾರ್ಗದಲ್ಲಿ ಸಾರ್ವಜನಿಕ ಸೇವೆ ಆರಂಭಗೊಳ್ಳುತ್ತಿದ್ದಂತೆ ನಿಲ್ದಾಣಗಳ ಸಂಖ್ಯೆ 32ಕ್ಕೆ ಹಿಗ್ಗಲಿದೆ. ವಿಸ್ತರಿತ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಒಳಗೊಂಡಿದೆ. ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಬೆಂಗಳೂರಿನ ಮೊದಲ ಮೆಟ್ರೋ ಮಾರ್ಗ ಇದಾಗಿರಲಿದೆ.
ಸದ್ಯ ಈ ಕಿರು ಮಾರ್ಗದಲ್ಲಿನ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಸುರಕ್ಷತಾ ಕ್ರಮ ಪರಿಶೀಲನೆ ಹಾಗೂ ಪ್ರಾಯೋಗಿಕ ರೈಲು ಓಡಾಟ ಜೂನ್ನಲ್ಲಿ ನಡೆಯಲಿದೆ. ಹೀಗಾಗಿ ಸಿದ್ಧತಾ ಕೆಲಸಗಳು ವೇಗ ಪಡೆದುಕೊಂಡಿವೆ. ಸಿಗ್ನಲಿಂಗ್ ಕೆಲಸಗಳು ಮುಗಿಯುತ್ತಿದ್ದಂತೆ, ದೆಹಲಿಯಿಂದ ಮೆಟ್ರೋ ರೈಲ್ವೆ ಸುರಕ್ಷತಾ ಆಯೋಗದ ಅಧಿಕಾರಿಗಳು ಆಗಮಿಸಿ ನಿಲ್ದಾಣದಲ್ಲಿ ಸುರಕ್ಷತೆ, ಸಿಗ್ನಲಿಂಗ್, ಟ್ರ್ಯಾಕ್ ಮುಂತಾದ ವ್ಯವಸ್ಥೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ನಂತರದಲ್ಲಿ ಪ್ರಮಾಣಪತ್ರ ದೊರೆಯುತ್ತಿದ್ದಂತೆ ಅಧಿಕೃತವಾಗಿ ಸಂಚಾರ ಆರಂಭವಾಗಲಿದೆ.