

ನಗರಂಗೆರೆ ಗ್ರಾಮದಲ್ಲಿ ಸೋಮವಾರ ಕೋತಿಗಳ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಪಿಡಿಒ ಮಾತನಾಡಿದರು. "ಪಂಚಾಯಿತಿ ವ್ಯಾಪ್ತಿಯ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ಸೇರಿಕೊಂಡಿದ್ದ ಮೂರು ಕೋತಿಗಳು ಶಾಲಾ ಮಕ್ಕಳ ಮೇಲೆ ಎರಗಿ ಗಾಯಗೊಳಿಸಿದ್ದವು. ಅಲ್ಲದೆ, ಗ್ರಾಮದ ಆಶಾ ಕಾರ್ಯಕರ್ತೆಯರಿಗೂ ಕಚ್ಚಿ, ಚಿಕ್ಕ ಮಗುವೊಂದನ್ನು ಎಳೆದಾಡಿ ಜನರಲ್ಲಿ ಭಯಭೀತಿ ಹುಟ್ಟಿಸಿದ್ದವು" ಎಂದು ಮಾಹಿತಿ ನೀಡಿದರು.
ಕೋತಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಪಂಚಾಯಿತಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಕೂಡಲೇ ತಾಲೂಕು ಪಂಚಾಯಿತಿ ಅನುಮತಿ ಪಡೆದು ನಾಗಮಂಗಲ ತಾಲೂಕಿನಿಂದ ಕೋತಿ ಸೆರೆಹಿಡಿಯುವ ಪರಿಣಿತರ ತಂಡವನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನೂ ಮೂರು ದಿನ ಕಾರ್ಯಾಚರಣೆ
ಮೂರು ದಿನಗಳ ಕಾರ್ಯಾಚರಣೆಯಲ್ಲಿ ಇದುವರೆಗೆ ಸುಮಾರು 25 ಕೋತಿಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇನ್ನೂ ಮೂರು ದಿನ ಕಾರ್ಯಾಚರಣೆ ನಡೆಸಿ ಉಳಿದ ಕೋತಿಗಳನ್ನು ಅರಣ್ಯಕ್ಕೆ ಸುರಕ್ಷಿತವಾಗಿ ಬಿಡುವ ಕೆಲಸ ಮಾಡಲಾಗುವುದು ಎಂದು ರಾಮಚಂದ್ರಪ್ಪ ತಿಳಿಸಿದರು.
ಕೋತಿಗಳ ಉಪಟಳವನ್ನು ತಕ್ಷಣವೇ ನಿವಾರಿಸಿದ ಪಂಚಾಯಿತಿ ಆಡಳಿತದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗ್ರಾಪಂ ಸದಸ್ಯ ಅಜ್ಮತ್‌ವುಲ್ಲಾ, ಎಂ. ರಮೇಶ್, ಕೆ.ಎಂ. ಬಸವರಾಜ, ಶಂಕರ್‌ಪಾಟೀಲ್, ಡಿ.ಬಿ. ಓಬಣ್ಣ, ಮಂಜಣ್ಣ, ವಿಜಯಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.