

ಬೆಂಗಳೂರು: ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರಪಂಚಮಿ. ಇದು ಹೆಣ್ಣು ಮಕ್ಕಳಿಗೆ ಸಂಭ್ರಮದ ಹಬ್ಬ. ಈ ಪಂಚಮಿ ಹಬ್ಬವನ್ನು ಮಂಗಳವಾರ ನಗರದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆಯಿಂದಲೇ ಸಮೀಪದ ಅಶ್ವತ್ಥಕಟ್ಟೆಯ ನಾಗರಕಲ್ಲು ಹಾಗೂ ಹುತ್ತದ ಬಳಿ ತೆರಳಿ ಅರಿಶಿನ ಕುಂಕುಮ ಹಾಗೂ ಹೂಗಳಿಂದ ಅಲಂಕರಿಸಿ, ತಂಬಿಟ್ಟು ಸೇರಿ ಹಣ್ಣು ಕಾಯಿ ಅರ್ಪಿಸಿ ನೈವೇದ್ಯ ಮಾಡಿದ ಭಕ್ತರು ಹಾಲಿನಿಂದ ತನಿ ಎರೆಯುವ ಮೂಲಕ ಪೂಜೆ ನೆರವೇರಿಸಿದರು. ಸಕಲ ದೋಷ ಹಾಗೂ ಕಷ್ಟ ನಿವಾರಣೆಗಾಗಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ನಾಗ ದೇವರನ್ನು ಪ್ರಾರ್ಥಿಸಿದರು.
ನಾಗ - ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ:
ದೊಡ್ಡ ಆಲದ ಮರದ ಬಳಿಯ ಮುಕ್ತನಾಗ ದೇವಾಲಯ, ಸಿಲ್ಕ್ ಬೋರ್ಡ್ ಸಮೀಪದ ಶ್ರೀ ಅಮ್ಮ ನಾಗಮ್ಮ ದೇವಾಲಯ, ವಿಜಯನಗರದಲ್ಲಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಸಜ್ಜನ್ ರಾವ್ ವೃತ್ತದ ಬಳಿಯ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಚಾಮರಾಜಪೇಟೆಯ ರಾಮೇಶ್ವರ ದೇವಾಲಯ, ಮಲ್ಲೇಶ್ವರದ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಸೇರಿ ನಗರದ ಶಿವ ದೇವಾಲಯ, ಸುಬ್ರಹ್ಮಣ್ಯಸ್ವಾಮಿ ದೇಗುಲ ಹಾಗೂ ನಾಗದೇವಾಲಯಗಳಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.
ಮೂರು ದಿನಗಳ ಆಚರಣೆ:
ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಸಂಭ್ರಮ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ರೊಟ್ಟಿ ಪಂಚಮಿ, ಎರಡನೇ ದಿನ ನಾಗರ ಚೌತಿ, ಮೂರನೇ ದಿನ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ಹಾಗಾಗಿ ನಗರದಲ್ಲಿ ಉತ್ತರ ಕರ್ನಾಟಕದ ಮಂದಿ ನೆಲೆಸಿರುವ ಬಡಾವಣೆಗಳಲ್ಲಿ ನಾಗರಪಂಚಮಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.