

ಕೊಳ್ಳೇಗಾಲ: ತಾಲೂಕಿನ ಹರಳೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ನಾಗಮ್ಮ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಹರಳೆ ಗ್ರಾಮ ಪಂಚಾಯಿತಿಯಲ್ಲಿ ತಲಾ 15 ತಿಂಗಳಂತೆ 2 ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು. ರಂಗಸ್ವಾಮಿ ಅವರು 15 ತಿಂಗಳ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಳೆ ಗ್ರಾಮ ಪಂಚಾಯತಿಯಲ್ಲಿ 17 ಸದಸ್ಯರ ಬಲವಿದ್ದು 13 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಕೃಷಿ ಅಧಿಕಾರಿ ನಾಗೇಂದ್ರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷ ನಾಗರಾಜು ಮಾತನಾಡಿ, ನನಗೆ ಸಿಕ್ಕಿರುವ ಅಲ್ಪ ಅವಧಿಯಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಹಂಪಾಪುರ ಬಿ.ಬಸವಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಲೋಕೇಶ್, ರಂಗಸ್ವಾಮಿ ಸದಸ್ಯರಾದ ಲೀಲಾ, ಮಹಾದೇವ, ಮೀನಾ ಲೋಕೇಶ್, ಮಾಜಿ ಸದಸ್ಯರಾದ ಕಾಂತರಾಜು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜಮ್ಮಣಿ ಇದ್ದರು.