

* ಬಾಲ್ಯದಿಂದಲೂ ವ್ಯವಸಾಯದಲ್ಲಿ ಅಪರಿಮಿತ ಪ್ರೀತಿ
* ಜಮೀನಿನಲ್ಲಿ ವಿವಿಧ ತರಕಾರಿ ಬೆಳೆ ಸೀಜನ್ ಪ್ರಕಾರ ಕೃಷಿ ಬೇಡಿಕೆಗೆ ತಕ್ಕಂತೆ ಬೆಳೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಭೂ ತಾಯಿ ನಂಬಿ ಕೆಟ್ಟವರಿಲ್ಲ ಎಂಬ ಮಾತಿಗೆ ತಾಲೂಕಿನ ಸಂಕಲಗೆರೆ ಗ್ರಾಮದ ಪ್ರಗತಿಪರ ರೈತ ನಾಗಣ್ಣ ಸಾಕ್ಷಿ ಎನ್ನಬಹುದು.
ಹೌದು.. ವ್ಯವಸಾಯ ಎಂದರೆ ಮೂಗು ಮುರಿಯುವ ಈ ಹೊತ್ತಿನಲ್ಲಿ ಕೃಷಿಯಿಂದಲೇ ಬದುಕು ಕಟ್ಟಿಕೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ. ಗ್ರಾಮದ ಹೊನ್ನಮ್ಮ ಹಾಗೂ ಜವರೇಗೌಡ ಅವರ ಪುತ್ರನಾಗಿ ಜನಿಸಿದ ನಾಗಣ್ಣ, ಬಾಲ್ಯದಿಂದಲೂ ವ್ಯವಸಾಯದ ಬಗ್ಗೆ ಅಪರಿಮಿತ ಪ್ರೀತಿ ಹಾಗೂ ಆಸಕ್ತಿ ಮೂಡಿಸಿಕೊಂಡವರು. ಭೂ ತಾಯಿಯನ್ನು ಅಚಲವಾಗಿ ನಂಬಿ ಬದುಕು ಕಟ್ಟಿಕೊಳ್ಳುವ ಜತೆಗೆ ತನ್ನ ಇಬ್ಬರು ಪುತ್ರರಿಗೂ ಭೂ ತಾಯಿಯೊಂದಿಗೆ ನಂಟು ಅಂಟಿಸಿ ಸಮೃದ್ಧ ಜೀವನ ಸಾಗಿಸುವ ಮೂಲಕ ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.
ಏಳು ಎಕರೆ ಪಿತ್ರಾರ್ಜಿತ ಜಮೀನಿನ ಜತೆಗೆ, ಐದು ಎಕರೆ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದು, ತರಕಾರಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿರುವ ಲಭ್ಯ ನೀರಾವರಿ ಸೌಲಭ್ಯ ಬಳಸಿಕೊಂಡು ಒಂದಲ್ಲ ಒಂದು ತರಕಾರಿ ಬೆಳೆಯುವುದು ಇವರ ನಿರಂತರ ಕಾಯಕ. ಟೊಮ್ಯಾಟೋ, ಹೀರೆಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ, ಅವರೆಕಾಯಿ, ಪರಂಗಿ ಸೇರಿ ಒಂದಲ್ಲ ಒಂದು ತರಕಾರಿ ಇವರ ಜಮೀನಿನಲ್ಲಿ ಇದ್ದೆ ಇರುತ್ತದೆ. ಆಯಾ ಸೀಜನ್‌ನಲ್ಲಿ ಮಾರುಕಟ್ಟೆಯಲ್ಲಿ ಯಾವ ತರಕಾರಿಗೆ ಬೇಡಿಕೆ ಇರುತ್ತದೆ ಎಂಬುದನ್ನು ಕರಗತ ಮಾಡಿಕೊಂಡಿರುವ ಇವರು, ಅದರಂತೆ ತರಕಾರಿ ಬೆಳೆದು ಲಾಭ ಕಾಣುತ್ತಿದ್ದಾರೆ. ಜತೆಗೆ ತೆಂಗು ಬೆಳೆಯಲ್ಲಿಯೂ ಲಾಭ ಕಂಡು ಕೊಂಡಿದ್ದಾರೆ.
ಟ್ರ್ಯಾಕ್ಟರ್ ಸೇರಿ ಆಧುನಿಕ ಕೃಷಿ ಉಪಕರಣ ಹೊಂದಿರುವ ನಾಗಣ್ಣ, ಭೂಮಿಯ ಫಲವತ್ತತೆಗೆ ಧಕ್ಕೆ ಆಗದಂತೆ ಕೃಷಿ ನಡೆಸುವುದು ವಿಶೇಷ. ತಮ್ಮ ಜಮೀನಿನ ಫಲವತ್ತತೆಗೆ ಜಾನುವಾರುಗಳ ಗೊಬ್ಬರ ಆಶ್ರಯಿಸಿದ್ದು, ಕೃಷಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ತನ್ನ ಅನುಭವದ ಆಧಾರದ ಮೇಲೆ ವಿವಿಧ ತರಕಾರಿ ಕೃಷಿಯಲ್ಲಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಕಾಯಕ ತತ್ವದ ಮೇಲೆ ನಂಬಿಕೆ ಇಟ್ಟಿರುವ ಇವರಿಗೆ ಪತ್ನಿ ವಿಶಾಲಕ್ಷಿ ಹಾಗೂ ಪುತ್ರರಾದ ಸುನೀಲ್ ಮತ್ತು ಸಚಿನ್ ಬೆನ್ನೆಲುಬಾಗಿ ನಿಂತಿದ್ದಾರೆ. ತಾವು ಬೆಳೆದ ತರಕಾರಿಯನ್ನು ರಾಮನಗರ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಬಿಕರಿ ಮಾಡುವ ಜತೆಗೆ, ಸ್ಥಳೀಯವಾಗಿಯೂ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಮಿಶ್ರಕೃಷಿಯೂ ಇವರ ಯಶಸ್ಸಿನ ಮಾರ್ಗವಾಗಿದೆ ಎನ್ನಬಹುದು.
ಒಮ್ಮೊಮ್ಮೆ ತರಕಾರಿ ಕೃಷಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಉದಾಹರಣೆಗಳಿದ್ದು, ನಿರಂತರವಾದ ಬೆಳೆಗಳು ಇರುವ ಹಿನ್ನೆಲೆಯಲ್ಲಿ ಲಾಭ ಹಾಗೂ ನಷ್ಟಗಳನ್ನು ಸರಿಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ.