

ಚಿಂತಾಮಣಿ: ನಗರದ ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯದ ಈ ಹಿಂದಿನ ಸಮಿತಿ ರದ್ದು ಮಾಡಿ, ನೂತನ ಸಮಿತಿ ರಚಿಸಲು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಆದೇಶಿಸಿದ ಹಿನ್ನೆಲೆಯಲ್ಲಿ ಭಾನುವಾರ ನೂತನ ಸಮಿತಿ ಪದಾಧಿಕಾರಿಗಳು ದೇವಾಲಯದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದರು.
ನೂತನ ಸಮಿತಿ ಸದಸ್ಯ ಸುಬ್ರಹ್ಮಣ್ಯಂ ಮಾತನಾಡಿ, ಮೂಲ ಲಿಂಗವನ್ನು ಎತ್ತಿ ಪುನಃ ಪ್ರತಿಷ್ಠೆ ಮಾಡುವ ವಿಚಾರದಲ್ಲಿ ವಿವಾದ ಮತ್ತು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರ ಹಳೇ ಸಮಿತಿಯನ್ನು ರದ್ದು ಮಾಡಿ, ನೂತನ ಸಮಿತಿಯನ್ನು ಮೂರು ವರ್ಷಗಳ ಕಾಲ ನೇಮಕ ಮಾಡಿ ಆದೇಶ ಹೊರಡಿಸಿದೆ ಎಂದರು.
ತಹಸೀಲ್ದಾರ್, ಅಧ್ಯಕ್ಷರು ಮತ್ತು ಖಜಾಂಚಿಗೆ ಪೂರ್ಣ ಅಧಿಕಾರ ಕೊಟ್ಟಿದ್ದು, ಉಳಿದ ವ್ಯವಹಾರ ನೋಡಿಕೊಳ್ಳಲು ಸಮಿತಿಯನ್ನು ನೇಮಕ ಮಾಡಿದೆ ಎಂದರು.
ಯಾವುದೇ ಕೆಲಸ ಮಾಡಬೇಕಾದರೂ ಸರ್ಕಾರದ ಅನುಮತಿ ಅಗತ್ಯ. ಪ್ರತಿಯೊಂದು ಕೆಲಸವನ್ನು ಸರ್ಕಾರ ನೇಮಕ ಮಾಡಿರುವವರು ತಪಾಸಣೆ ಮಾಡುತ್ತಾರೆ. ಅವರ ನಿರ್ದೇಶನದ ಮೇಲೆ ಕೆಲಸ ನಡೆಯಬೇಕು ಎಂದರು.
ದೇವಾಲಯ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧವಾಗಿದೆ. ಇಲಾಖೆ ಪರಿಶೀಲನೆ ನಡೆಸಿದೆ, ಶೀಘ್ರದಲ್ಲಿಯೇ ಗರ್ಭಗುಡಿ ನವೀಕರಣ, ಹಾಲಿ ಕಟ್ಟಡ ನವೀಕರಣವನ್ನು ಸರ್ಕಾರದ ನಿರ್ದೇಶನದಂತೆ ಮಾಡುವ ಜತೆಗೆ ಮುಂದಿನ ಶಿವರಾತ್ರಿಯ ವೇಳೆಗೆ ದೇವಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಎಂ.ಎಸ್.ಶ್ರೀನಿವಾಸ್, ಗಂಗಾಧರ್, ಟಿ.ಶ್ರೀನಿವಾಸ್, ಎನ್.ಲೋಕೇಶ್, ಆರ್.ನವೀನ್, ತಿಮ್ಮರಾಯಪ್ಪ, ಎಸ್.ಲೋಕನಾಥ್, ನಾರಾಯಣಸ್ವಾಮಿ, ಸಿ.ಕೆ.ಮುರಳಿ, ಸುನೀತಾ, ಎಂ.ಸುಜಾತಾ, ಕೆ.ಎನ್.ಎಸ್.ನಂದೀಶ್, ರಾಜೇಶ, ಎನ್.ಬಾಬುರೆಡ್ಡಿ, ಜೆ.ಶ್ರೀನಿವಾಸ್ ಹಾಗೂ ದೇವಾಲಯದ ಅರ್ಚಕರಾದ ರಾಮು ಮತ್ತು ನಾಗೇಂದ್ರ ಉಪಸ್ಥಿತರಿದ್ದರು.