ಹೊಸ ಗೂಡಲ್ಲಿ ಭರವಸೆಯ ಬದುಕಿನ ಪುಟ ತೆರೆದ ನಾಗಮ್ಮಜ್ಜಿ!; ವಿಜಯವಾಣಿ, ದಾನಿಗಳ ನೆರವಿಗೆ ಭಾವುಕ ಕೃತಜ್ಞತೆ

Front
Published on

ಬಂಟ್ವಾಳ (ದ.ಕ.): ಹಳೆಯ ಮನೆ ಯಾವಾಗ ಮೈಮೇಲೆ ಬೀಳುವುದೋ ಎಂಬ ಆತಂಕ, ಬಾಗಿಲು ಹಾಕುವುದಕ್ಕೂ ದುಗುಡ. ಹೀಗೆ ಶಿಥಿಲಾವಸ್ಥೆಯ ಮನೆಯಲ್ಲೇ ವಾಸವಿದ್ದ ಆ ಕುಟುಂಬವೀಗ ಹೊಸ ಮನೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ವಾಸಯೋಗ್ಯ ಮನೆಯ ಕನಸು ಕಾಣುತ್ತಿದ್ದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ನಾಗಮ್ಮಜ್ಜಿಯ ಹಲವು ವರ್ಷಗಳ ಬೇಡಿಕೆ ಭಾನುವಾರ ಈಡೇರಿತು. ವಿಜಯವಾಣಿ, ದಿಗ್ವಿಜಯ ನ್ಯೂಸ್ 24ಗಿ7, ಜೆಸಿಐ ಮತ್ತು ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ ನಿರ್ವಿುಸಲಾದ ಸುಸಜ್ಜಿತ ಮನೆಯನ್ನು (ನಾಗಮ್ಮಜ್ಜಿನ ಇಲ್ಲ್) ಮನೆಯೊಡತಿಗೆ ಹಸ್ತಾಂತರಿಸಲಾಯಿತು. ಕುಟುಂಬದ ಬಂಧುಗಳು, ನೆರೆಹೊರೆಯವರು, ದಾನಿಗಳು, ಹಿತೈಷಿಗಳ ಉಪಸ್ಥಿತಿಯಲ್ಲಿ ಧಾರ್ವಿುಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಸಂಭ್ರಮದಿಂದ ನೆರವೇರಿತು. ಊರವರು ಗೃಹಪ್ರವೇಶದ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ, ಹೃದಯಪೂರ್ವಕವಾಗಿ ಹರಸಿದರು.

ಮಳೆಗಾಲದಲ್ಲಿ ಮನೆಯಲ್ಲಿರಲು ಭಯವಾಗುತ್ತಿತ್ತು. ಮೊಮ್ಮಕ್ಕಳು ಬಾಗಿಲು ಹಾಕುವಾಗ ಮೆಲ್ಲನೆ ಹಾಕಿ, ಇಲ್ಲದಿದ್ದರೆ ಬಿದ್ದೀತು ಎಂದು ಬೊಬ್ಬಿಡುತ್ತಿದ್ದೆ. ವಿಜಯವಾಣಿ ಎಲ್ಲರನ್ನೂ ಸೇರಿಸಿ ನಮಗೆ ಮನೆ ನಿರ್ವಿುಸಿ ಕೊಟ್ಟಿದೆ. ಖುಷಿಯಾಗುತ್ತಿದೆ. ಎಲ್ಲರಿಗೂ ಕೃತಜ್ಞತೆಗಳು. | ನಾಗಮ್ಮಜ್ಜಿ ಮನೆಯೊಡತಿ, ಜಾರಂದಗುಡ್ಡೆ

6 ತಿಂಗಳಲ್ಲಿ ಮನೆ: ಬಡ ನಾಗಮ್ಮಜ್ಜಿಯ ಕಷ್ಟಕ್ಕೆ ಮರುಗಿದ್ದ ವಿಜಯವಾಣಿ ಬಳಗ ಮತ್ತು ಜೆಸಿಐ ಬಂಟ್ವಾಳದ ಮುಂದಾಳತ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ ಸೇರಿ ಹಲವು ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಶ್ರಮದಾನ ಮೂಲಕ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಜೂ.11ರಂದು ಆರಂಭಗೊಂಡ್ದ ನಿರ್ಮಾಣ 6 ತಿಂಗಳಲ್ಲಿ ಪೂರ್ಣಗೊಂಡಿತು.

ವಿಜಯವಾಣಿ ಮತ್ತು ಸಮಾನಮನಸ್ಕ ಸಂಘಟನೆಗಳ ಕಾರ್ಯ ಶ್ಲಾಘನೀಯ. ಜಾತಿ, ಧರ್ಮ ತಾರತಮ್ಯವಿಲ್ಲದೆ ಮನೆ ನಿರ್ವಿುಸಿರುವುದು ಮಾದರಿ. ಇಂತಹ ಕೆಲಸವನ್ನು ವಿಜಯವಾಣಿ ಮುಂದುವರಿಸಬೇಕು. ಉಳ್ಳಾಲ ದರ್ಗಾ ಸಮಿತಿ ಈ ಕಾರ್ಯದಲ್ಲಿ ಕೈಜೋಡಿಸಲಿದೆ.

| ಅಬ್ದುಲ್ ರಶೀದ್ ಅಧ್ಯಕ್ಷ, ಸೈಯ್ಯದ್ ಮದನಿ ದರ್ಗಾ ಉಳ್ಳಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net