

ಚನ್ನಪಟ್ಟಣ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆಯಲ್ಲಿ ಹೊರ ಮತ್ತು ಒಳ ರೋಗಿಗಳ ಸ್ಥಿತಿಗತಿ, ಆಸ್ಪತ್ರೆ ಆವರಣದಲ್ಲಿನ ಸ್ವಚ್ಛತೆ, ವೈದ್ಯರ ಸೇವೆ, ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಸೌಲಭ್ಯ ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಆಸ್ಪತ್ರೆಯ ಟ್ಯಾಂಕರ್ ಸ್ವಚ್ಛವಾಗದಿರುವ ಬಗ್ಗೆ, ಕಲುಷಿತ ನೀರು ಪೂರೈಕೆಯಿಂದ ರೋಗಿಗಳ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿರನ್ನು ತರಾಟೆಗೆ ತೆಗೆದುಕೊಂಡರು.
ವಾಟರ್ ಟ್ಯಾಂಕ್ ಅನ್ನು ಕ್ಲಿನಿಂಗ್ ಮಾಡದೆ ಇರುವುದರಿಂದ ನೀರಿನಲ್ಲಿ ಹುಳುಗಳು ಕಂಡು ಬರುತ್ತಿವೆ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಮಯದಲ್ಲಿ ನೀವುಗಳು ಈ ಬಗ್ಗೆ ಇಷ್ಟು ಉದಾಸೀನತೆ ತೋರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಕೂಡಲೇ ಟ್ಯಾಂಕ್ ಸ್ವಚ್ಛಗೊಳಿಸುವಂತೆ ಆದೇಶಿಸಿದರು.