ಮದ್ದೂರು: ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಮದ್ದೂರಿನಲ್ಲಿ ಜೂ.27 ರಂದು ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಚಂದುಪೂರ ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಂಪೇಗೌಡ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದವರು. ಇವರ ಜನ್ಮದಿನ ಸರ್ವಜನಾಂಗದ ಉತ್ಸವವಾಗಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಬಿ.ವಿ.ಶಂಕರೇಗೌಡ ಮಾತನಾಡಿ, ತಾಲೂಕು ಆಡಳಿತದೊಟ್ಟಿಗೆ ಸೇರಿ ಪ್ರತಿ ವರ್ಷದಂತೆ ಈ ವರ್ಷವು ಜಯಂತಿ ಆಚರಿಸೋಣ. ಶಾಸಕ ಕೆ.ಎಂ.ಉದಯ್ ಅವರ ಸಹಕಾರ ಪಡೆಯೋಣ ಎಂದರು.
ತಾಲೂಕು ಆಡಳಿತದ ಸಹಯೋಗದಲ್ಲಿ ಶಾಲಾ ಮಕ್ಕಳೊಂದಿಗೆ ಶ್ರೀ ನರಸಿಂಹಸ್ವಾಮಿ ದೇವಸ್ಥಾನದಿಂದ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ, ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲು ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಯುವ ಘಟಕದ ಅಧ್ಯಕ್ಷ ತಿಪ್ಪೂರು ಮನು, ಮಹಿಳಾ ಘಟಕದ ಅಧ್ಯಕ್ಷೆ ಕರಡಕೆರೆ ವಸಂತಾ, ಸಂಘಟನಾ ಕಾರ್ಯದರ್ಶಿ ಅವಿನಾಶ್ ಶಂಕರಪುರ, ತಗ್ಗಹಳ್ಳಿ ಗೋಪಾಲ್, ವರ್ಧಮಾನ ಸ್ಕೂಲ್‌ನ ದೀಪಕ್, ಮುಖಂಡರಾದ ನ.ಲಿ.ಕೃಷ್ಣ, ಉಪ್ಪಿನಕೆರೆ ಶಿವರಾಮ್, ನಿವತ್ತ ಶಿಕ್ಷಕರಾದ ನಾರಾಯಣ, ಚನ್ನಪ್ಪ, ಹಳ್ಳಿಕೆರೆ ಬೊಮ್ಮೇಗೌಡ ಇದ್ದರು.