

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಷ್ಟ್ರೀಯ ಮಾನ್ಯತಾ ಮಂಡಳಿ ನಿಯಮದಂತೆ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರಾಷ್ಟ್ರೀಯ ಆಸ್ಪತ್ರೆ ಮನ್ಯತಾ ಮಂಡಳಿಯಿಂದ 2ನೇ ಬಾರಿಗೆ ಎನ್‌ಎಬಿಎಚ್ ಪ್ರಮಾಣಪತ್ರ ದೊರೆತಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಎನ್.ಎ.ಬಿ.ಎಚ್. ಪ್ರಮಾಣ ಪತ್ರ ಅನಾವರಣಗೊಳಿಸಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆಯವರ ಆಶಯದಂತೆ ಡಿ.ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಹೆಗ್ಗಡೆ ಪರಿವಾರದ ಎಲ್ಲರ ಸಹಕಾರದಲ್ಲಿ ಆಸ್ಪತ್ರೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡುತ್ತಿದೆ. ಗ್ರಾಮೀಣ ಜನತೆ ನಗರದ ಹೈಟೆಕ್ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆ, ಯಶಸ್ವಿ ಶಸ್ತ್ರಚಿಕಿತ್ಸೆ, ವಿಶೇಷ ಕಾಳಜಿಯ ಆರೈಕೆ, ಮಿತದರದ ಚಿಕಿತ್ಸೆ, ಶುಚಿತ್ವ, ಉಚಿತ ಡಯಾಲಿಸಿಸ್ ಸೇವೆ, ಉಚಿತ ವೈದ್ಯಕೀಯ ಶಿಬಿರ ಎಲ್ಲವೂ ಜನರ ವಿಶ್ವಾಸ ಗಳಿಸಿದೆ.
ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯಿಂದ ಸುರಕ್ಷಿತ ಹೆರಿಗೆ ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮಾನ್ಯತಾ ಪ್ರಮಾಣಪತ್ರ ದೊರೆತಿದೆ.
ಈ ಆಸ್ಪತ್ರೆ ರಾಷ್ಟ್ರೀಯ ಮಾನ್ಯತಾ ಮಂಡಳಿ ಮಾನದಂಡದಂತೆ ವೈದ್ಯಕೀಯ ಸೇವೆ ನೀಡುತ್ತಿರುವುದರಿಂದ 2ನೇ ಬಾರಿಗೆ ಎನ್‌ಎಬಿಎಚ್ ಪ್ರಮಾಣಪತ್ರ ದೊರೆತ್ತಿರುವುದಕ್ಕೆ ಡಿ.ಹರ್ಷೇಂದ್ರಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ತಿಳಿಸಿದ್ದಾರೆ.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಡಾ.ಮೀರಾ ಅನುಪಮಾ, ಡಾ.ಪ್ರೌಸ್ಟಿಲ್, ಎನ್.ಎ.ಬಿ.ಎಚ್ ನಿಯಮ ಪಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.