

ತುಮಕೂರು: ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಎಲ್ಲ ಸಿದ್ಧಾಂತದ ಸಾಹಿತಿಗಳೊಡನೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಕಾದಂಬರಿಕಾರ ನಾ.ಡಿಸೋಜ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಂಡವರಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ನಾ.ಡಿಸೋಜ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, 2014ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜ ಸರಳ ಸಜ್ಜನಿಕೆ ವ್ಯಕ್ತಿಯಾಗಿ ಕ್ಯಾಥೋಲಿಕ್ ಕ್ರೆೃಸ್ತರಾಗಿದ್ದರೂ ಎಂದೂ ಚರ್ಚ್ಗೆ ಹೋಗದೆ ವೈಯಕ್ತಿಕ ಧರ್ಮದಿಂದ ದೂರವೇ ಉಳಿದಿದ್ದರು ಎಂದರು.
ವೃತ್ತಿಯಿಂದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ ಪ್ರವೃತ್ತಿಯಿಂದ ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದ ಶ್ರೇಷ್ಠ ಕಾದಂಬರಿಕಾರ ನಾ.ಡಿಸೋಜ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ 65 ಕೃತಿಗಳನ್ನು ರಚಿಸಿದ್ದಾರೆ. ಇದು ಎಲ್ಲಾ ಸಾಹಿತ್ಯ ವಿದ್ವತ್ ವಲಯದಲ್ಲಿ ಸಂಚಲನವನ್ನುಂಟು ಮಾಡಿದೆ. ಇವರೊಬ್ಬ ಸ್ವಯಂಪ್ರಭೆಯ ಸಾಹಿತಿ. ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ನುಡಿದರು.
ಸಾಗರದಲ್ಲಿ ಹುಟ್ಟಿ ಬೆಳೆದ ನಾ.ಡಿಸೋಜ, ಗುಮಾಸ್ತರಾಗಿ ತಮ್ಮ ವೃತ್ತೀಜಿವನವನ್ನು ಆರಂಭಿಸಿ ಅಂತಿಮವಾಗಿ ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ ಅದ್ಭುತವಾದ ಹಲವಾರು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಲನಾಡ ಮುಳುಗಡೆ ಎಂದೇ ಕರೆಸಿಕೊಳ್ಳುತ್ತಿದ್ದ ಅವರ ಕಾದಂಬರಿಗಳು ಅತ್ಯಂತ ಜನಪ್ರಿಯತೆಯನ್ನು ಪಡೆದು ಚಲನಚಿತ್ರಗಳಾಗಿಯೂ ಹೊರಬಂದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಲೇಖಕ ಶಂಕರಾನಂದ ಎಂದರು.
ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸರಳ ವಿಶಿಷ್ಟ ಶೈಲಿಯ ಸಾಹಿತಿಗಳಾಗಿದ್ದ ನಾಡಿಸೋಜ ತಮ್ಮ ಕೃತಿಗಳಲಿ ವಿಚಾರಗಳನ್ನು ಹಂಚಿಕೊಳ್ಳುವ ಅವರ ಶೈಲಿ ಶ್ರೀಮಂತವಾಗಿತ್ತು. ಅಹಂ ಇಲ್ಲದ ವ್ಯಕ್ತಿತ್ವ, ಇತರರಿಗೆ ಮಾದರಿ. ಸಾಹಿತ್ಯಿಕ ಚಿಂತನೆ, ವೈಚಾರಿಕತೆ, ಮುಗ್ಧತೆ ಎಂತಹವರನ್ನೂ ಅವರ ಬಳಿ ಕೊಂಡೊಯ್ಯುತ್ತಿತ್ತು. ಇಂತಹ ವ್ಯಕ್ತಿತ್ವದ ಡಿಸೋಜ ನಮ್ಮ ನಡುವೆ ಇಲ್ಲದಿದ್ದರೂ ಅವರ ಸಾಹಿತ್ಯ ಹಾಗೂ ಯೋಚನೆಗಳು ಸದಾ ನಮ್ಮೊಂದಿರುಗಿರುವುದು ಸತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾ. ಸಣ್ಣಹೊನ್ನಯ್ಯ ಕಂಟಲಗೆರೆ, ಜಿ.ಎಚ್.ಮಹದೇವಪ್ಪ, ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಸಂಜೀವ್ಸುಂದರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಸಾಪದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಡಾ. ಎಂ.ಎನ್.ಚನ್ನಸಪ್ಪ, ಡಾ. ಜಯರಾಮರಾವ್, ಪ್ರೊ. ಮುಜಾಫರ್ ಅಸಾದಿ ಅವರುಗಳಿಗೂ ಸಹ ಶ್ರದ್ಧಾಂಜಲಿ ಅರ್ಪಿಸಲಾಯಿತು.