ಹೆದ್ದಾರಿ ನಿರ್ಮಾಣಕ್ಕೆ ಸಚಿವರಿಗೆ ಪ್ರಸ್ತಾವನೆ

Untitled design(8)
ರಾಯಚೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿದರು. ವಾಣಿಜ್ಯೋದ್ಯಮಿಗಳಾದ ವಿ.ಲಕ್ಷ್ಮೀರೆಡ್ಡಿ, ಸಾವಿತ್ರಿ ಪುರುಷೋತ್ತಮ, ತ್ರಿವಿಕ್ರಮ ಜೋಷಿ, ನಾಗನಗೌಡ ಹರವಿ, ತ್ರಿವಿಕ್ರಮ ಜೋಷಿ, ರಾಮಚಂದ್ರ ಪ್ರಭು, ಬೆಲ್ಲಂ ನರಸರೆಡ್ಡಿ, ವಿಷ್ಣುಕಾಂತ ಬುತಡಾ ಇದ್ದರು.
Published on

ರಾಯಚೂರು: ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ಉದ್ಯಮ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ. ವಿದ್ಯುತ್ ಬಿಲ್ ಹಾಗೂ ತೆರಿಗೆ ಹೆಚ್ಚಳ ಇತರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ನಗರ ಹೊರವಲಯದ ಯರಮರಸ್ ಪ್ರವಾಸಿ ಮಂದಿರದಲ್ಲಿ ಶನಿವಾರ ನಗರದ ಅಭಿವೃದ್ಧಿ ನಿಟ್ಟಿನಲ್ಲಿ ವಾಣಿಜ್ಯೋದ್ಯಮ ಸಂಘ ಹಾಗೂ ವಿವಿಧ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು.

ಸಚಿವ ನಿತಿನ್ ಗಡ್ಕರಿಗೆ ಮನವಿ

ರಾಯಚೂರಿನಲ್ಲಿ ಸಂಚಾರ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಕಲ್ಮಲಾದಿಂದ ಮಂತ್ರಾಲ ರಸ್ತೆವರೆಗೆ 22 ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಲಾಗಿದೆ. ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ ಮಾತನಾಡಿ, ಜಿಲ್ಲೆಗೆ ಹೊಂದಿಕೊಂಡು ಎರಡು ನದಿಗಳಿದ್ದರೂ ಕೈಗಾರಿಕೆಗಳಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಜತೆಗೆ ಆರ್‌ಟಿಪಿಎಸ್, ವೈಟಿಪಿಎಸ್ ಮೂಲಕ ಶೇ.40ರಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಸರ್ಕಾರ ರೈತ ಮುಖಂಡರೊಂದಿಗೆ ಚರ್ಚಿಸಿ ಎಲ್ಲರಿಗೂ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕು ಎಂದರು.


ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ ಮಾತನಾಡಿ, ಮೆಗಾ ಟೆಕ್ಸಟೈಲ್ ಪಾರ್ಕ್ ನಿರ್ಮಾಣಕ್ಕೆ ಸಾವಿರ ಎಕರೆ ಜಾಗ ಮಂಜೂರು ಮಾಡಬೇಕು. ಅಲ್ಲದೆ ಕೈಗಾರಿಕೆಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು. ಗಂಜ್ ವೃತ್ತದಿಂದ ಶಕ್ತಿನಗರದವರೆಗೆ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿದ್ದು, ದ್ವಿಪಥ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ನಗರದ ಅಭಿವೃದ್ಧಿ ನಿಟ್ಟಿನಲ್ಲಿ ರಿಬೂಟ್ ರಾಯಚೂರು ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕ್ಷೇತ್ರದವರ ಸಮಸ್ಯೆ ಆಲಿಸಿ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸಲಾಗುವುದು ಎಂದು ಎನ್.ಎಸ್.ಬೋಸರಾಜು ತಿಳಿಸಿದರು. ವಾಣಿಜ್ಯೋದ್ಯಮಿಗಳಾದ ನಾಗನಗೌಡ ಹರವಿ, ತ್ರಿವಿಕ್ರಮ ಜೋಷಿ, ರಾಮಚಂದ್ರ ಪ್ರಭು, ಬೆಲ್ಲಂ ನರಸರೆಡ್ಡಿ, ವಿಷ್ಣುಕಾಂತ ಬುತಡಾ, ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಜಿ.ಬಸವರಾಜರೆಡ್ಡಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net