More

    6 ಕೆಜಿ ಗಡ್ಡೆ ಹೊರ ತೆಗೆದ ವೈದ್ಯರು

    ವಿಜಯಪುರ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳನ್ನು ತಪಾಸಣೆ ನಡೆಸಿ ಜೆಎಸ್‌ಎಸ್ ಆಸ್ಪತ್ರೆ ವೈದ್ಯರ ತಂಡ ಆಕೆಯ ಹೊಟ್ಟೆಯಲ್ಲಿದ್ದ 6 ಕೆಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.

    ನಗರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಂದಿದ್ದ 37 ವರ್ಷದ ಮಹಿಳೆ ಕಳೆದ 6 ತಿಂಗಳಿಂದ ಹೊಟ್ಟೆ ನೋವು ಬರುತ್ತಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ಸ್ತ್ರೀ ರೋಗ ತಜ್ಞೆ ಡಾ. ಭಾಗ್ಯಶ್ರೀ ಪೂಜಾರಿ ಪರೀಕ್ಷೆ ನಡೆಸಿದಾಗ ಗರ್ಭಕೋಶಕ್ಕೆ ಅಂಟಿಕೊಂಡಂತೆ ದೊಡ್ಡದಾಗಿ ಗಡ್ಡೆ ಬೆಳೆದಿತ್ತು. ಅದನ್ನು ತೆಗೆಯದೇ ಹೋದರೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಅಪಾಯವಿತ್ತು. ಊಟ ಸಹ ಮಾಡಲು ಆಗುತ್ತಿರಲಿಲ್ಲ. 37 ವರ್ಷದ ಮಹಿಳೆ ತೂಕ 40 ಕೆಜಿಯಾಗಿತ್ತು. ಅದರಲ್ಲಿ 6 ಕೆಜಿ ಗಡ್ಡೆ ಬೆಳೆದಿತ್ತು. ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಶಸ್ತ್ರಚಿಕಿತ್ಸೆ ನೆರವೇರಿಸಿ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
    ಗಡ್ಡೆಯೊಂದಿಗೆ ಗರ್ಭಕೋಶ ಬೆಸೆದುಕೊಂಡ ಕಾರಣ ಗರ್ಭಕೋಶಕ್ಕೆ ಹೊಡೆತ ಬಿದ್ದರೆ ಮುಂದೆ ಬಂಜೆತನ ಕಾಡುವ ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡ ಜೆಎಸ್‌ಎಸ್ ಆಸ್ಪತ್ರೆ ವೈದ್ಯರ ತಂಡ ಕೇವಲ ಗಡ್ಡೆಯನ್ನು ಮಾತ್ರ ಹೊರ ತೆಗೆದು ಗರ್ಭಕೋಶಕ್ಕೆ ಯಾವುದೇ ತೊಂದರೆ ಮಾಡದಂತೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

    ಈ ಶಸ್ತ್ರ ಚಿಕಿತ್ಸೆಗೆ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಚೇತನ ಜಂಗಲಪ್ಪನವರ ನೆರವಾದರು. ಶಸ್ತ್ರ ಚಿಕಿತ್ಸೆ ನಂತರ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ. ವೈದ್ಯರ ಕಾರ್ಯಕ್ಕೆ ಶಾಸಕ ಹಾಗೂ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜೆಎಸ್‌ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣ ಮಳಖೇಡ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts