

ಮಾನ್ವಿ: ಸನ್ಮಾರ್ಗ ತೋರಿರುವ ಶರಣರು, ಸಂತರ ತತ್ವಗಳನ್ನು ತಿಳಿಸುವ ಪುರಾಣ ಪ್ರವಚನ ಕೇಳುವುದರಿಂದ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ರಾಯಚೂರಿನ ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೀವೈಕ್ಯ ಶ್ರೀ ವಿಜಯರುದ್ರ ಮಹಾಸ್ವಾಮಿಗಳ 10ನೇ ವರ್ಷದ ಜಾತ್ರೋತ್ಸವ ಹಾಗೂ ಸಜ್ಜಲಗುಡ್ಡದ ಶರಣಮ್ಮ ತಾಯಿ ಅವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ. ಪ್ರತಿಯೊಬ್ಬರೂ ಮಹನೀಯರ ತತ್ವಗಳನ್ನು ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿ, ಆದರ್ಶ ಪ್ರಾಯರಾಗಬೇಕು ಎಂದರು.
ಕರೇಗುಡ್ಡ ಶ್ರೀ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿ ಮಾತನಾಡಿದರು. ಬಸವಲಿಂಗಯ್ಯ ಶಾಸ್ತ್ರಿ ಪುರಾಣ , ಆರ್.ಪಿ.ಮಲ್ಲಿನಾಥ ಸ್ವಾಮಿ ತಬಲ ಸಾಥ್ ನೀಡಿದರು. ಗ್ರಾಪಂ ಅಧ್ಯಕ್ಷ ಚನ್ನಬಸವ ಪೊಲೀಸ್ ಪಾಟೀಲ್, ಸದಸ್ಯ ಮೌನೇಶಗೌಡ ಪ್ರಮುಖರಾದ ಸೂಗೂರಯ್ಯ ಆರ್.ಎಸ್.ಹಿರೇಮಠ, ಅಮರೇಗೌಡ ಪೊಲೀಸ್ ಪಾಟೀಲ್, ನಿಲ್ಲಪ್ಪಗೌಡ ಮಾಲಿಪಾಟೀಲ್, ಹೊಸಗೌಡರು ಬಸವರಾಜಪ್ಪ, ಅಮರೇಶನಾಯಕ, ಚಾಮರಸ ಮಾಲಿಪಾಟೀಲ್, ಬಸವರಾಜನಾಯಕ, ಅಯ್ಯಣ್ಣ, ಶಶಿಧರ ಹಿರೇಮಠ ಇತರರಿದ್ದರು.