

ಚಿತ್ರ: ‘ರುದ್ರ ಗರುಡ ಪುರಾಣ’
ನಿರ್ದೇಶಕ: ಕೆ.ಎಸ್.ನಂದೀಶ್
ತಾರಾಗಣ: ರಿಷಿ, ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್.ಪೇಟೆ, ಗಿರೀಶ್ ಶಿವಣ್ಣ ಮತ್ತಿತರರು.
ಶಿವ ಸ್ಥಾವರಮಠ
ಎಂದೋ ಮಾಡಿದ ಪಾಪ ಕಾರ್ಯಗಳು ಮುಂದೊಂದು ದಿನ ನಮಗೆ ಅತಿಮಾನುಷ ಶಕ್ತಿಯಾಗಿ ಬೆಂಬಿಡದೆ ಕಾಡುತ್ತವೆ. ಹಾಗೆಯೇ, ಮಾಡಿದ್ದ ಪಾಪಕ್ಕೆ ತಕ್ಕ ಶಿಕ್ಷೆ ನೀಡುತ್ತವೆ ಎಂಬುದನ್ನು ನಿರ್ದೇಶಕ ಕೆ.ಎಸ್.ನಂದೀಶ್ ‘ರುದ್ರ ಗರುಡ ಪುರಾಣ’ದ ಮೂಲಕ ನಿರೂಪಿಸಿದ್ದಾರೆ.
ರಾಜ್ಯದ ಪ್ರಭಾವಿ ರಾಜಕಾರಣಿ ದೇವಿಶೆಟ್ಟಿ (ವಿನೋದ್ ಆಳ್ವ). ಈತನ ಪುತ್ರ ಕಣ್ಮರೆಯಾಗುತ್ತಾನೆ. ಈ ಸುದ್ದಿಯನ್ನು ಬಿಟ್ಟುಕೊಡದೇ ರಹಸ್ಯವಾಗಿಯೇ ಕಾರ್ಯಾಚರಣೆ ಮಾಡುವಂತೆ ಈ ಕೇಸ್ ರುದ್ರನ (ರಿಷಿ) ಕೈ ಸೇರುತ್ತದೆ. ಆಗಲೇ, ರೌಡಿಯನ್ನು ಎನ್ಕೌಂಟರ್ ಮಾಡಿ, ಹಿಂಬಡ್ತಿ ಹೊಂದಿದ್ದ ರುದ್ರನಿಗೆ ಈ ಕೇಸ್ ಪರಿಹರಿಸಿ ಮತ್ತೆ ಪ್ರಮೋಷನ್ ಪಡೆಯಬೇಕು ಎಂಬ ಆಸೆ ಚಿಗುರುತ್ತದೆ. ಇದಕ್ಕಾಗಿ ಹಗಲು-ರಾತ್ರಿ ಎನ್ನದೆ ತನಿಖೆಗೆ ಮುಂದಾಗುತ್ತಾನೆ. ಮೊದಲು ಕಗ್ಗಂಟಾಗಿ ಪರಿಣಮಿಸಿದರೂ, ಕೊನೆಗೆ ಕೇಸ್ 25 ವರ್ಷಗಳ ಹಿಂದಿನ ಘಟನೆಗೆ ತೆರೆದುಕೊಳ್ಳುತ್ತದೆ. ಹಾಗಾದರೆ ಆ ಘಟನೆ ಏನು? ಅಷ್ಟಕ್ಕೂ ರಾಜಕಾರಣಿ ಮಗನ ಅಪಹರಣದ ಹಿಂದಿನ ರೂವಾರಿ ಯಾರು? ರುದ್ರನ ಕಾರ್ಯಾಚರಣೆ ಹೇಗಿರುತ್ತದೆ? ಎಂಬುದನ್ನು ತಿಳಿಯಬೇಕಾದರೆ ನೀವು ‘ರುದ್ರ ಗರುಡ ಪುರಾಣ’ ಸಿನಿಮಾ ನೋಡಲೇಬೇಕು.
ನಿರ್ದೇಶಕ ಕೆ.ಎಸ್.ನಂದೀಶ್ ಕಥೆಗೆ ಹಲವು ಆಯಾಮಗಳನ್ನು ನೀಡಿದ್ದಾರೆ. ಜತೆಗೆ ಕರ್ಮ ಸಿದ್ಧಾಂತ, ಗರುಡ ಪುರಾಣ, ನ್ಯಾಯ, ಸತ್ಯ ಹೀಗೆ ಹಲವು ಅಂಶಗಳನ್ನು ಹೇಳಿದ್ದಾರೆ. ಪ್ರತಿ ಕ್ಷಣಕ್ಕೂ ಹಲವು ವಿಷಯಗಳು, ಸ್ಥಳಗಳು, ವ್ಯಕ್ತಿಗಳು ಬರುತ್ತವೆ. ಆಗ ಸ್ವಲ್ಪ ಗೊಂದಲ ಎನಿಸುತ್ತದೆ. ಸ್ವಲ್ಪ ಲೆಂಥಿಯಾಯಿತು ಅಂತನ್ನಿಸಿದರೂ, ಕಥೆಯುದ್ದಕ್ಕೂ ರೋಚಕತೆಯನ್ನು ಹಿಡಿದಿಟ್ಟುಕೊಳ್ಳಲಾಗಿದೆ. ರಿಷಿ ಕಥೆ ತುಂಬ ಆವರಿಸಿದ್ದು, ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಇನ್ನು ಪ್ರಿಯಾಂಕಾ ಕುಮಾರ್ ಪಾತ್ರ ಕೆಲವೇ ಕೆಲವು ನಿಮಿಷಗಳಿಗೆ ಸೀಮಿತವಾಗಿದ್ದಾರೆ. ವಿನೋದ್ ಆಳ್ವ ವಿಲನ್ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಇಷ್ಟಪಡುವವರು ‘ರುದ್ರ ಗರುಡ ಪುರಾಣ’ವನ್ನು ಒಮ್ಮೆ ನೋಡಬಹುದು.