ಮೈಸೂರು: ಸ್ವಚ್ಛ ಭಾರತ ಅಭಿಯಾನ ಮತ್ತು ಶೌಚಗೃಹಗಳ ನಿರ್ಮಾಣದಿಂದ ದೇಶದ ಆರೋಗ್ಯ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನದ ನೈಜ ರಾಯಭಾರಿಗಳು ಹಾಗೂ ಸ್ವಚ್ಛತೆಯ ಅಸಲಿ ಶಿಲ್ಪಿಗಳು ಪೌರಕಾರ್ಮಿಕರು. ಇಂದು ಮೈಸೂರಿಗೆ ಸ್ವಚ್ಛ ನಗರಿ ಎಂಬ ಹೆಸರು ಬಂದಿದ್ದರೆ ಅದಕ್ಕೆ ಪೌರಕಾರ್ಮಿಕ ಸಮುದಾಯದ ಕಠಿಣ ಪರಿಶ್ರಮವೇ ಕಾರಣ. ಹಾಗಾಗಿ ಈ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ದೇಶ ಇಂದು ಸ್ವಚ್ಛ ಭಾರತ ಅಭಿಯಾನ ಮತ್ತು ಶೌಚಗೃಹಗಳ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿದೆ. ಇದರ ಪರಿಣಾಮ ಆರೋಗ್ಯ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಯಾಗಿದೆ. ಯುನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ, ಸ್ವಚ್ಛತೆಯಿಂದಾಗಿ ಭಾರತದಲ್ಲಿ ಶಿಶು ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದರು.
ನಗರದ ಹೊರಭಾಗವೂ ಸ್ವಚ್ಛಗೊಳ್ಳಲಿ:
ಸ್ವಚ್ಛನಗರಿಯಲ್ಲಿ ಅರಮನೆ ಸುತ್ತ ಮುತ್ತ, ನಗರದ ಹೃದಯಭಾಗದಲ್ಲಿ ಮಾತ್ರ ಸ್ವಚ್ಛತೆ ಇದ್ದರೆ ಸಾಲದು, ನಗರದ ಹೊರಭಾಗ, ರಿಂಗ್ ರಸ್ತೆಯಲ್ಲಿಯೂ ಸ್ವಚ್ಛತೆ ಕಾಪಾಡಬೇಕು ಎಂದು ಸಂಸದರು ಹೇಳಿದರು.
ನಗರಪಾಲಿಕೆ ವಿಸ್ತರಣೆ, ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಅದಕ್ಕಾಗಿ ಗ್ರೇಟರ್ ಮೈಸೂರು ಮಾಡುವ ಅಗತ್ಯವಿದೆ. ಈ ಮೂಲಕ ಈ ಸ್ವಚ್ಛತೆಯ ಹಿರಿಮೆಯನ್ನು ಉಳಿಸಿಕೊಳ್ಳಲು ಸರ್ಕಾರವೂ ಬೆಂಬಲ ನೀಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು ಇಡೀ ದೇಶದಲ್ಲೇ ಸ್ವಚ್ಛ ನಗರಿ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳಲು ಪೌರಕಾರ್ಮಿಕರ ನಿರಂತರ ಪರಿಶ್ರಮವೇ ಮೂಲ ಕಾರಣ ಎಂದು ಬಣ್ಣಿಸಿದರು.
ಮೈಸೂರು ಕೇವಲ ಸಾಂಸ್ಕೃತಿಕ ಮತ್ತು ಪರಂಪರೆಯ ನಗರವಾಗಿಷ್ಟೇ ಅಲ್ಲದೆ ಕ್ಲೀನ್ ಸಿಟಿಯಾಗಿ ಹೆಸರುವಾಸಿಯಾಗಿದೆ. ಪ್ರಧಾನಮಂತ್ರಿಯವರು ಸೇರಿದಂತೆ ವಿದೇಶಿ ಗಣ್ಯರು ಹಾಗೂ ರಾಜ್ಯದ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದಾಗ ಮೈಸೂರಿನ ಸ್ವಚ್ಛತೆಯನ್ನು ಹೊಗಳಿ ಮಾತನಾಡಿದ್ದು, ಈ ಗೌರವವು ಪೌರಕಾರ್ಮಿಕರು, ಹೆಲ್ತ್ ಇನ್‌ಸ್ಪೆಕ್ಟರ್‌ಗಳು, ನೈರ್ಮಲ್ಯ ಮೇಲ್ವಿಚಾರಕರು ಹಾಗೂ ಪರಿಸರ ಇಂಜಿನಿಯರ್‌ಗಳ ಶ್ರಮಕ್ಕೆ ಸಲ್ಲುತ್ತದೆ ಎಂದರು.
ನಗರಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದ ಮೂಲಕ ನಗರದ ಸುಮಾರು 80 ಜಿವಿಪಿ ಕಸ ಬೀಳುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಪೌರಕಾರ್ಮಿಕರ ಶ್ರಮದಿಂದ ಯಶಸ್ವಿಯಾಗಿ ಕಸಮುಕ್ತ ಹಾಗೂ ತ್ಯಾಜ್ಯಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಕಾರ್ಮಿಕರ ಆರೋಗ್ಯ ಮತ್ತು ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಉತ್ತಮ ಗುಣಮಟ್ಟದ ಗ್ಲೌಸ್, ಶೂ, ಮಾಸ್ಕ್ ಹಾಗೂ ಸಮವಸ್ತ್ರಗಳನ್ನು ಒದಗಿಸಲಾಗಿದೆ. ಇದರೊಂದಿಗೆ ವಿಮಾ ಸೌಲಭ್ಯ ಸಹ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆಯ ಹೆಚ್ಚುವರಿ ಆಯುಕ್ತೆ ವೀಣಾ, ಉಪ ಆಯುಕ್ತರಾದ ಶ್ರೀನಿವಾಸ್, ಸಿಂಧೂ, ಸೋಮಶೇಖರ್, ದಾಸೇಗೌಡ, ನಗರದ ಪಂಚ ಗ್ಯಾರಂಟಿಗಳ ಅಧ್ಯಕ್ಷೆ ಆರ್.ಪುಷ್ಪವಲ್ಲಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಮುಖಂಡ ಮಾರಾ ಇತರರು ಇದ್ದರು.