

ಹುಣಸೂರು: ಸರ್ಕಾರಿ ನೌಕರಿಯ ಮೂಲಕ ಕುಟುಂಬ ಭದ್ರತೆ ಹೊಂದಿರುವ ನಾವು ಸಾರ್ವಜನಿಕರ ಸೇವೆಯನ್ನು ಕಟಿಬದ್ಧತೆಯಿಂದ ಮಾಡುವ ಮೂಲಕ ಸಾರ್ಥಕ್ಯ ಹೊಂದಬೇಕಿದೆ ಎಂದು ಉಪವಿಭಾಗಾಧಿಕಾರಿ ಜಿ.ಡಿ.ಶೇಖರ್ ಅಭಿಪ್ರಾಯಪಟ್ಟರು.
ನಗರದ ಕಾಫಿವರ್ಕ್ಸ್ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ನವೀಕೃತ ಕಚೇರಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ಸೇವೆಯ ಅವಧಿಯಲ್ಲಿ ಮತ್ತು ನಿವೃತ್ತರಾದ ಮೇಲೂ ಭದ್ರತೆ ಹೊಂದಿರುತ್ತಾರೆ. ಇಂತಹ ಸೌಭಾಗ್ಯ ಇನ್ಯಾರಿಗೂ ಸಿಕ್ಕಿಲ್ಲ. ನಿಮ್ಮ ಸೇವಾ ಅವಧಿಯಲ್ಲಿ ಸಾರ್ವಜನಿಕ ಸೇವೆಯನ್ನು ಉತ್ತಮ ರೀತಿಯಲ್ಲಿ ನಡೆಸಿದ್ದರೆ ನಿವೃತ್ತರಾದ ನಂತರ ಸಮಾಜ ಕೂಡ ನಿಮಗೆ ಭದ್ರತೆ ನೀಡುತ್ತದೆ. ಅದರೆ ಸರ್ಕಾರಿ ಕೆಲಸಕ್ಕೆ ಸೇರುವ ವೇಳೆ ಇರುವ ಉತ್ಸಾಹ ಕಾಲಾನಂತರದಲ್ಲಿ ಕಾಣಿಸುವುದಿಲ್ಲ. ನಿಮ್ಮ ಸುತ್ತಮುತ್ತ ಸಾಮಾಜಿಕ ಜಾಲತಾಣಗಳು, ಮಾಧ್ಯಮ ಎಲ್ಲವೂ ಇರುತ್ತದೆ ಎನ್ನುವುದನ್ನು ಅರಿಯಿರಿ. ಕರ್ತವ್ಯದ ವೇಳೆ ನೀತಿನಿಯಮಗಳ ಪಾಲನೆ ಕಡ್ಡಾಯವಾಗಿ ಮಾಡಿರಿ. ವೈಯಕ್ತಿಕ ಜೀವನ ಸನ್ನಡತೆಯಿಂದ ಕೂಡಿರಲಿ. ಸರ್ಕಾರಿ ನೌಕರರ ನಡುವಿನ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಿರಿ. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಅಥವಾ ಸಿಂಪಥಿ ತೋರುವ ಮನೋಭಾವ ತ್ಯಜಿಸಿರಿ. ನೀವು ನಿಷ್ಪಕ್ಷಪಾತವಾಗಿದ್ದಲ್ಲಿ ಮಾತ್ರ ಜನರು ನಿಮ್ಮನ್ನು ಗುರುತಿಸುತ್ತದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಕೆ.ಬಿ.ಶಶಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, 6 ಲಕ್ಷ ರೂ. ವೆಚ್ಚದಡಿ ಕಟ್ಟಡದ ನವೀಕರಣ ಕಾರ್ಯ ನಡೆಸಲಾಗಿದೆ. ಎಲ್ಲ ಸರ್ಕಾರಿ ಇಲಾಖೆಗಳಿಂದ ಈ ಕಾರ್ಯಕ್ಕೆ ಹೆಚ್ಚಿನ ನೆರವು, ಬೆಂಬಲ ದೊರೆತ ಕಾರಣ ಈ ಕಾರ್ಯ ಸಾಧ್ಯವಾಗಿದೆ. ರಾಜ್ಯಾಧ್ಯಕ್ಷ ಷಡಕ್ಷರಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಕಟ್ಟಡದ ಮೇಲಂತಸ್ತಿನ ಕಾಮಗಾರಿ ಇನ್ನು 6 ತಿಂಗಳಲ್ಲಿ ಪೂರೈಸಲು ಉದ್ದೇಶಿಸಿದ್ದು, ಶಾಸಕ ಜಿ.ಡಿ.ಹರೀಶ್‌ಗೌಡ ಶಾಸಕರ ಅನುದಾನದಡಿ 10 ಲಕ್ಷ ರೂ.ನೀಡುವುದಾಗಿ ಭರವಸೆ ನೀಡಿದ್ದಾರೆ. ನವಂಬರ್ ತಿಂಗಳಾಂತ್ಯಕ್ಕೆ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಆಯೋಜಿಸುವುದಾಗಿ ತಿಳಿಸಿದರು.
ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಪೌರಾಯುಕ್ತೆ ಎಂ.ಮಾನಸ, ರಾಜ್ಯಸಮಿತಿ ಸದಸ್ಯರಾದ ಶ್ರೀಪಾದ ನಲವತ್ತವಾಡಕರ್, ಮಾಲೇಗೌಡ ಮಾತನಾಡಿದರು. ಕಾರ್ಯದರ್ಶಿ ಮಾರುತಿ, ಖಜಾಂಚಿ ಎಚ್.ಪಿ.ಗಿರೀಶ್, ಪ್ರಾಧ್ಯಾಪಕ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ಬಿಆರ್‌ಸಿ ಹೇಮಲತಾ, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜ್, ಎಸಿ ಕಚೇರಿ ತಹಸೀಲ್ದಾರ್ ಯದುಗಿರೀಶ್, ಸಿಡಿಪಿಒ ಬೋರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರತಿ, ಎಆರ್‌ಟಿಒ ಲೋಲಾಕ್ಷಿ, ಜಿಲ್ಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಚನ್ನವೀರಯ್ಯ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಗೋವಿಂದೇಗೌಡ ಇತರರು ಇದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ: ಸರ್ಕಾರಿ ನೌಕರರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಂಘದ ವತಿಯಿಂದ ಪ್ರಸ್ತುತ ಸಾಲಿನಿಂದ ಸಿಇಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿರಿ. ಇದರಿಂದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಉಪವಿಭಾಗಾಧಿಕಾರಿ ಸಲಹೆ ನೀಡಿದರು.