ಯುವಕರಿಗೆ ಸಾಮಾಜಿಕ ಹೊಣೆಗಾರಿಕೆ ಅವಶ್ಯ: - ನಿವೃತ್ತ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ

ಹತ್ತು ದಿನಗಳ ನೃತ್ಯ ತರಬೇತಿ ಶಿಬಿರದ ಸಮಾರೋಪ
Social responsibility is essential for the youth: Retired Professor Mysuru Krishnamurthy
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರೊ.ಮೈಸೂರು ಕೃಷ್ಣಮೂರ್ತಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ನಾ.ದಿವಾಕರ್, ಪ್ರೊ.ಎಚ್.ಆರ್.ಮಂಜುನಾಥ್, ಪ್ರೊ.ಎ.ಎಸ್.ಮಹೇಶ್, ಕೃಷ್ಣ ಜನಮನ, ಶಿಬಿರಾರ್ಥಿಗಳು ಇದ್ದರು. ಶಿಬಿರದ ಸಮಾರೋಪ
Published on

ಮೈಸೂರು:ತಾಂತ್ರಿಕ ಹಾಗೂ ಉದ್ಯೋಗ ಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಇಂದಿನ ದಿನಗಳಲ್ಲಿ ಮನುಷ್ಯನನ್ನು ರೂಪಿಸುವ ಕಲೆ ಮತ್ತು ಸಂಸ್ಕೃತಿಯನ್ನು ದೂರ ಇಡಲಾಗುತ್ತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಹತ್ತು ದಿನಗಳ ನೃತ್ಯ ತರಬೇತಿ ಶಿಬಿರದ ಸಮಾರೋಪ ಹಾಗೂ ನೃತ್ಯೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮನುಷ್ಯತ್ವವನ್ನು ಕಲಿಸುವ ಕಲೆಗಳಿಗೆ ನೀಡುತ್ತಿರುವ ಮಹತ್ವ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಯುವ ಸಮೂಹಕ್ಕೆ ಸಾಮಾಜಿಕ ಹೊಣೆಗಾರಿಕೆ ಇಲ್ಲ ಎನ್ನುವ ದೂರಿದೆ. ಹಾಗಾಗಿ ಸಮಾಜದಲ್ಲಿ ಯುವ ಜನರನ್ನು ಹೊಣೆಗಾರರನ್ನಾಗಿ ರೂಪಿಸಲು ಕಲೆ, ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆಯು ಸಾಂಸ್ಕೃತಿಕ ಸೆಲೆಯ ಜನಪದ ಸೇರಿದಂತೆ ಎಲ್ಲ ಕಲೆ ಪ್ರಕಾರಗಳ ಕಲಿಕೆಯ ತರಬೇತಿ ಶಿಬಿರಗಳನ್ನು ಆಯೋಜಿಸಲು ಚಿಂತನೆ ನಡೆಸಿ ಸುತ್ತೋಲೆ ಹೊರಡಿಸಬೇಕು. ಕಲಿಕೆೆಯೊಂದಿಗೆ ಕಲೆ ಬೆರೆತಾಗ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂವೇದನೆ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಯುತ್ತದೆ ಎಂದರು.

ಚಿಂತಕ ನಾ.ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಎಚ್.ಆರ್.ಮಂಜುನಾಥ್, ಕತೆಗಾರ ಪ್ರೊ.ಎ.ಎಸ್.ಮಹೇಶ್, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು. ಶಿಬಿರಾರ್ಥಿಗಳಿಂದ ಕಂಸಾಳೆ, ಕೋಲಾಟ ಸೇರಿದಂತೆ ಇತರೆ ಕಲೆಗಳ ನೃತ್ಯ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net