ದೇಶದ ಅಭಿವೃದ್ಧಿಗೆ ಜ್ಞಾನ ಬಳಸಿಕೊಳ್ಳಿ: ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಭಿಮತ

ಇಂಜಿನಿಯರುಗಳ ದಿನಾಚರಣೆ ಅಂಗವಾಗಿ ಸನ್ಮಾನ
Utilize knowledge for the country's development: Water Resources Minister N. Chaluvarayaswamy opines.
ಭಾರತೀಯ ಇಂಜಿನಿಯರುಗಳ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಿದ್ದ 59ನೇ ಇಂಜಿನಿಯರುಗಳ ದಿನಾಚರಣೆಯಲ್ಲಿ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಎನ್. ಚಲುವರಾಯ ಸ್ವಾಮಿ, ಕೆ.ಹರೀಶಗೌಡ, ದಿನೇಶ್‌ಗೂಳಿಗೌಡ, ಜಿ.ಕೆ.ಬಾಲಕೃಷ್ಣ, ಎಚ್.ಎಸ್.ಸುರೇಶ ಬಾಬು, ಎಂ.ಕೆ.ನಂಜಪ್ಪ, ಡಾ.ಆರ್.ದೀಪು, ಅನಿತಾ ವೆಂಕಟೇಶ ಇದ್ದರು.
Published on

ಮೈಸೂರು: ಭಾರತ ತನ್ನ ಪುರಾತನ ಜ್ಞಾನ, ಪರಂಪರೆ ಹಾಗೂ ಆಧುನಿಕ ವಿಜ್ಞಾನ, ತಂತ್ರಜ್ಞಾನವನ್ನು ಸಮನ್ವಯಗೊಳಿಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಅಂಗವಾಗಿ ಭಾರತೀಯ ಇಂಜಿನಿಯರುಗಳ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಿದ್ದ 59ನೇ ಇಂಜಿನಿಯರುಗಳ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಅತ್ಯಾಧುನಿಕ ಯಂತ್ರೋಪಕರಣ, ಇಂಜಿನಿಯರಿಂಗ್ ತಾಂತ್ರಿಕತೆ ಇಲ್ಲದ ದಿನಗಳಲ್ಲೂ ನಮ್ಮ ಪರಂಪರೆಯ ಬೃಹತ್ ದೇವಾಲಯಗಳನ್ನು ಹಿಂದಿನವರು ಹೇಗೆ ನಿರ್ಮಿಸುತ್ತಿದ್ದರು ಎನ್ನುವುದು ನಿಜಕ್ಕೂ ಆಶ್ಚರ್ಯ. ಸಾವಿರಾರು ವರ್ಷಗಳ ಇತಿಹಾಸ, ಜ್ಞಾನ ಪರಂಪರೆ, ಸಾಧು-ಸಂತರು ಹಾಗೂ ಸಾಧಕರ ಕೊಡುಗೆಯನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ ಎಂದರು.

ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಒಪ್ಪಿಕೊಂಡು ಮುನ್ನಡೆಯುತ್ತಿರುವ ದೇಶ ಭಾರತ ತನ್ನ ಪುರಾತನ ಜ್ಞಾನ, ಪರಂಪರೆ ಹಾಗೂ ಆಧುನಿಕ ವಿಜ್ಞಾನ ತಂತ್ರಜ್ಞಾನವನ್ನು ಸಮನ್ವಯಗೊಳಿಸಿಕೊಂಡು ನಡೆಯುತ್ತಿರುವುದರಿಂದಲೇ ಅಭಿವೃದ್ಧಿಯತ್ತ ಸಾಗಿದೆ. ಈ ಪಯಣದಲ್ಲಿ ಇಂಜಿನಿಯರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ಇಂಜಿನಿಯರ್‌ಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರ ಕೊಡುಗೆ ಹೋಲಿಸಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ವೃತ್ತಿಯೂ ಸಮಾಜದ ನಿರ್ಮಾಣದಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಹಿಂದೆ ಒಂದು ಹೊಸ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಸಮಯ, ಹಣ ಹಾಗೂ ತಾಂತ್ರಿಕ ನೆರವು ಅಗತ್ಯವಿತ್ತು. ಆದರೆ, ಇಂದು ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಯಿಂದಾಗಿ ರಾತ್ರಿ ಹೊತ್ತು ಮೂಡುವ ಆಲೋಚನೆಯನ್ನೇ ಮರುದಿನ ಕಾರ್ಯರೂಪಕ್ಕೆ ತರಬಹುದು ಎಂದು ಹೇಳಿದರು.

ಇಂದಿನ ಇಂಜಿನಿಯರ್‌ಗಳು ಕೇವಲ ತಮ್ಮ ವೃತ್ತಿಗೆ ಸೀಮಿತರಾಗದೆ ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನವನ್ನು ಬಳಸಿಕೊಳ್ಳಬೇಕು. ನಿವೃತ್ತರಾದವರು ತಮ್ಮ ಅನುಭವವನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಕೆ.ಹರೀಶ ಗೌಡ ಮಾತನಾಡಿ, ಇಂದಿನ ಆಧುನಿಕ ಸಮಾಜದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಜ್ಞಾನ-ತಂತ್ರಜ್ಞಾನದಿಂದ ಹಿಡಿದು ಮೂಲಸೌಕರ್ಯ, ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಇಂಜಿನಿಯರ್‌ಗಳ ಕೊಡುಗೆ ಅನಿವಾರ್ಯ. ಇಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದ ಅಭಿವೃದ್ಧಿಯನ್ನು ಇಂಜಿನಿಯರ್‌ಗಳ ಸಹಕಾರವಿಲ್ಲದೆ ಕಲ್ಪಿಸಿಕೊಳ್ಳುವುದು ಕಷ್ಟ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡು ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಜವಾಬ್ದಾರಿ ಇಂಜಿನಿಯರ್‌ಗಳ ಮೇಲಿದೆ ಎಂದರು.

ಹಿರಿಯ ನಿವೃತ್ತ ಇಂಜಿನಿಯರ್ ಜಿ.ಕೆ.ಬಾಲಕೃಷ್ಣ ಅವರು, ಇಂಜಿನಿಯರಿಂಗ್ ದಿನಾಚರಣೆ, ವಿಶ್ವೇಶ್ವರಯ್ಯ ಅವರ ಸಾಧನೆ ಕುರಿತು ಪ್ರಧಾನ ಭಾಷಣ ಮಾಡಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥೇಶ್ವರ ಸ್ವಾಮೀಜಿ, ವಿಧಾನ ಪರಿಷತ್ತು ಸದಸ್ಯ ದಿನೇಶ್‌ಗೂಳಿಗೌಡ, ಇಂಜಿನಿಯರುಗಳ ಸಂಸ್ಥೆಯ ಮೈಸೂರು ಶಾಖೆ ಅಧ್ಯಕ್ಷ ಎಚ್.ಎಸ್.ಸುರೇಶ ಬಾಬು, ಕಾರ್ಯದರ್ಶಿ ಎಂ.ಕೆ.ನಂಜಪ್ಪ, ಸಂಚಾಲಕ ಡಾ.ಆರ್.ದೀಪು, ಸಹ ಸಂಚಾಲಕಿ ಅನಿತಾ ವೆಂಕಟೇಶ ಇತರರು ಇದ್ದರು.

ವಿವಿಧ ಕ್ಷೇತ್ರದ ಇಂಜಿನಿಯರುಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net