

ಮೈಸೂರು: ದೇವಾಲಯ ಕಟ್ಟದಿದ್ದರೂ ವಿದ್ಯಾಲಯ ಕಟ್ಟಬೇಕು ಎಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಹೇಳಿದರು
ಸುತ್ತೂರು ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ಮೇಲೆ ಸದ್ಗುರುವಿನ ಸಾನ್ನಿಧ್ಯದಿಂದ ಮೋಕ್ಷ ಪಡೆಯುವುದು ಜೀವನದ ಮಹಾಭಾಗ್ಯವಾಗಿದೆ. ಸುತ್ತೂರಿನ ಶ್ರೀಗಳು ಮಾತೃ ಹೃದಯಿ. ಪೂಜ್ಯರ ಆಶೀರ್ವಾದ ಪಡೆದಿರುವ ನೀವೇ ಧನ್ಯರು. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕಿನಲ್ಲಿ ಸಾಧನೆಯೆಡೆಗೆ ನಡೆಯಬೇಕು ಎಂದರು.
ಅಲ್ಲಮಪ್ರಭುಗಳು ಹೇಳಿದಂತೆ ದೀಪ ಬತ್ತಿಯಿದ್ದರೂ, ತೈಲವಿಲ್ಲದೆ ಹಣತೆಯು ಹೇಗೆ ಪ್ರಕಾಶಿಸುವುದಿಲ್ಲವೋ ಹಾಗೆ ಅಂತರಂಗದ ಭಕ್ತಿ ಜಾಗೃತವಾಗದಿದ್ದರೆ ಸಾಧನೆಯ ಮಾರ್ಗ ಕಠಿಣವಾಗುತ್ತದೆ ಎಂದರು. ಶ್ರೀಮಠವು ನಾಡಿನ ಸಂಸ್ಕೃತಿ, ಸಾಹಿತ್ಯ ಹಾಗೂ ಆಧ್ಯಾತ್ಮಿಕತೆಯ ಪ್ರಸಾರಕ್ಕಾಗಿ ಶ್ರಮಿಸುತ್ತಿದೆ. ದೇಶಾದ್ಯಂತ ಹಲವು ಸಂಸ್ಥೆಗಳನ್ನು ತೆರೆದು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಗಳನ್ನು ಒದಗಿಸುತ್ತಿರುವುದು ಪ್ರಶಂಸನೀಯ ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳಲ್ಲಿ ನಮ್ಮ ದೇಶವು ಜಗತ್ತಿನಲ್ಲಿಯೇ ಹಿರಿದಾದ ಸ್ಥಾನ ಪಡೆದಿದೆ. ಸಾಧುಸಂತರು, ಋಷಿ ಮುನಿಗಳ ತಪಸ್ಸಿನ ಫಲದಿಂದ ಶಾಂತಿಯ ನೆಲೆಬೀಡಾಗಿದೆ. ಸದ್ಗುರು ಮಧುಸೂದನ ಸಾಯಿಯವರ ‘ಒಂದೇ ಜಗತ್ತು ಒಂದೇ ಕುಟುಂಬ’ ಎನ್ನುವ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡರೆ ಯುದ್ಧಮುಕ್ತ ಪ್ರಪಂಚವನ್ನು ಕಾಣಬಹುದು ಎಂದರು
ಜಗತ್ತಿನಲ್ಲಿ ಜನರು ಶಾಂತಿ, ಸೌರ್ಹಾದದಿಂದ ಬದುಕಬೇಕು. ಈ ನಿಟ್ಟಿನಲ್ಲಿ ಅವರ ಸೇವೆಯು ಅನನ್ಯ. ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಮಾಜಕ್ಕೆ ಅಗತ್ಯವಾದ ಇತರ ಎಲ್ಲ ಕ್ಷೇತ್ರಗಳಿಗೂ ಅವರು ನೀಡುತ್ತಿರುವ ಕೊಡುಗೆಗಳು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸುತ್ತೂರಿನ ಉಚಿತ ವಸತಿ ಶಾಲೆಯಲ್ಲಿ ವಿವಿಧ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಸ್. ರಾಘವೇಂದ್ರರಾವ್ ನೀಡುವ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ವಿಶ್ರಾಂತ ಕುಲಪತಿ ಡಾ.ಶಶಿಧರ್ ಪ್ರಸಾದ್, ಸತ್ಯಸಾಯಿ ಸಂಸ್ಥೆಯ ಗೋವಿಂದ ರೆಡ್ಡಿ, ಗಿರಿಧರ್ ನಾಯಕ್, ಜಯರಾಮ್ ರೆಡ್ಡಿ, ಸುನೀಲ್ ಭಾಗವಹಿಸಿದ್ದರು.