ಮೈಸೂರು: ದಸರಾ ಪುಸ್ತಕ ಮೇಳದಲ್ಲಿ ಪ್ರತಿ ದಿನ ಬೆಳಗ್ಗೆ ಹೊಸ ಪುಸ್ತಕಗಳ ಬಿಡುಗಡೆ, ಸಂಜೆ ‘ಸೆಲ್ಫಿ ವಿತ್ ಸಾಹಿತಿ’, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಈ ಸಲದ ವಿಶೇಷ.
ಜತೆಗೆ, ಪ್ರತಿ ದಿನ ‘ಕವಿತೆ ವಾಚಿಸಿ ಗಿಡ ಗಿಟ್ಟಿಸಿ’ ಎಂಬ ಹೊಸ ಕಾರ್ಯಕ್ರಮವನ್ನೂ ಆಯೋಜಿಸಿದ್ದು, ಆಸಕ್ತ ಕವಿಗಳು ತಮ್ಮ ಕವಿತೆ ಓದಿ ಒಂದು ಗಿಡ ಪಡೆಯಬಹುದಾಗಿದೆ.
ದಸರಾ ಮಹೋತ್ಸವ ಅಂಗವಾಗಿ ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಅ.11ರಿಂದ 20ರ ವರೆಗೆ ನಗರದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮೇಳವನ್ನು ಉದ್ಘಾಟಿಸುವರು. ಸುಮಾರು 70 ಪ್ರಕಾಶಕರು ಭಾಗವಹಿಸಲಿದ್ದು, 90 ಮಳಿಗೆ ನಿರ್ಮಾಣ ಮಾಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಬಾರಿಯಂತೆ ಈ ಬಾರಿಯೂ ಪುಸ್ತಕ ರಥದ ಮೂಲಕ ಪುಸ್ತಕ ಮೇಳಕ್ಕೆ ಪ್ರಚಾರ ನೀಡಲಾಗುವುದು. ಪುಸ್ತಕ ಮೇಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಗೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಹಾಗೆಯೇ ಇತ್ತೀಚೆಗೆ ನಿಧನರಾದ ಕಾದಂಬರಿಗಾರ್ತಿ ಸಿ.ಎನ್.ಮುಕ್ತಾ, ಮೈಸೂರು ಕಸಾಪ ಜಿಲ್ಲಾಧ್ಯಕ್ಷರಾಗಿದ್ದ ಮಡ್ಡೀಕೆರೆ ಗೋಪಾಲ್ ಅವರ ಹೆಸರಿನ ದ್ವಾರ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅ.11ರಂದು ಪ್ರಾಧಿಕಾರದ ವಿವಿಧ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುವುದು. ಜತೆಗೆ, ಅ.12ರಂದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಣವಾಗಿರುವ 12 ಕೃತಿಗಳ ಬಿಡುಗಡೆಗೊಳಿಸಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಬರಹಗಾರರು ಕಳುಹಿಸಿರುವ ಪುಸ್ತಕಗಳನ್ನೂ ಬಿಡುಗಡೆ ಮಾಡಲಾಗುವುದು. ಈವರೆಗೆ 25 ಕೃತಿಗಳು ಬಂದಿವೆ ಎಂದು ತಿಳಿಸಿದರು.
ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.13ರಂದು ಅಮ್ಮ ರಾಮಚಂದ್ರ ಅವರಿಂದ ಭಾವಗೀತೆ ಗಾಯನ, ಅ.14ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕ ಓದು ಕಾರ್ಯಕ್ರಮ, ಅ.15ರಂದು ಸಬ್ಬನಹಳ್ಳಿ ರಾಜು ಮತ್ತು ತಂಡದ ವತಿಯಿಂದ ಜಾನಪದ ಗೀತೆಗಳ ಗಾಯನ, ಅ.16ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಕೆ.ಎಸ್.ಎನ್.ಟ್ರಸ್ಟ್ ಸಹಯೋಗದಲ್ಲಿ ಕವಿಗೋಷ್ಠಿ ಮತ್ತು ಕುಂಚ, ಕಾವ್ಯ ಗಾಯನ ಏರ್ಪಡಿಸಲಾಗಿದೆ ಎಂದು ಡಾ.ಮಾನಸ ಮಾಹಿತಿ ನೀಡಿದರು.
ಅ.17ರಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ರಂಗಗೀತೆ ಗಾಯನ, ಅ.18ರಂದು ಚಾಮರಾಜನಗರದ ಸಿ.ಎಂ.ನರಸಿಂಹಮೂರ್ತಿ, ಬಿ.ಬಸವರಾಜು ತಂಡದಿಂದ ಕನಕ ಕೀರ್ತನೆ-ತತ್ವಪದಗಳ ಗಾಯನ, ಅ.19ರಂದು ತುಮಕೂರಿನ ಎ.ಎನ್.ತಿಮ್ಮಯ್ಯ ಅವರಿಂದ ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಪ್ರಸಂಗ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ನಿರ್ಮಲಾ ಮಠಪತಿ, ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕಿ ಸುಮಾ ಬಿ.ಕೋಡಿಹಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಪ್ರಾಧ್ಯಾಪಕ ಪರಶುರಾಮ್ ಇದ್ದರು.