ಜೈಮಿನಿ ಭಾರತ, ಕರ್ಣಾಟ ಭಾರತ ಕಥಾಮಂಜರಿ ಪುಸ್ತಕಕ್ಕೆ ಭಾರೀ ಬೇಡಿಕೆ

15 ದಿನದಲ್ಲಿ 1 ಸಾವಿರ ಪ್ರತಿ ಮಾರಾಟ ಲಕ್ಷ್ಮೀಶನ ಜೈಮಿನಿ ಭಾರತ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಪುಸ್ತಕಕ್ಕೆ ಭರ್ಜರಿ ಬೇಡಿಕೆ
ಜೈಮಿನಿ ಭಾರತ, ಕರ್ಣಾಟ ಭಾರತ ಕಥಾಮಂಜರಿ ಪುಸ್ತಕಕ್ಕೆ ಭಾರೀ ಬೇಡಿಕೆ
ಮೈಸೂರು ವಿಶ್ವವಿದ್ಯಾಲಯHuge demand for Jaimini Bharat, Karnataka Bharat story book
Published on: 

ಮೈಸೂರು: ಮೈಸೂರು ವಿವಿ ಪ್ರಸಾರಾಂಗ ಹೊರತಂದಿರುವ ಲಕ್ಷ್ಮೀಶನ ‘ಜೈಮಿನಿ ಭಾರತ’ ಮತ್ತು ಕುಮಾರವ್ಯಾಸನ ’ಕರ್ಣಾಟ ಭಾರತ ಕಥಾಮಂಜರಿ’ ಪುಸ್ತಕಗಳು ಬಿಡುಗಡೆಯಾದ 15 ದಿನದೊಳಗೆ ತಲಾ 1,000 ಪ್ರತಿಗಳು ದಾಖಲೆಯ ಮಾರಾಟವಾಗಿವೆ.

ಇನ್ನೂ ಕೆಲವೇ ದಿನಗಳಲ್ಲಿ ಈ ಕೃತಿಗಳ ತಲಾ 1,000 ಪ್ರತಿಗಳ ಮರು ಮುದ್ರಣಕ್ಕೆ ಮೈಸೂರಿನ ಉದ್ಯಮಿ ಜಗನ್ನಾಥ ಶೆಣೈ ಅವರು ಮತ್ತೊಮ್ಮೆ ಧನ ಸಹಾಯ ನೀಡಲು ಒಪ್ಪಿದ್ದಾರೆ. ದಸರಾ ಸಂದರ್ಭದಲ್ಲಿ ಆಯೋಜಿಸಿದ್ದ ಪುಸ್ತಕಮೇಳದಲ್ಲಿ ಪ್ರಸಾರಾಂಗದ ಪುಸ್ತಕಗಳ ಮಾರಾಟದಿಂದ ನಿವ್ವಳ 3.36 ಲಕ್ಷ ರೂ. ಭರ್ಜರಿ ವ್ಯಾಪಾರವಾಗಿದೆ.

ಅಂದಾಜು 7.5 ಲಕ್ಷಕ್ಕೂ ಅಧಿಕ ಮುಖಬೆಲೆಯ ಪುಸ್ತಕಗಳು ವ್ಯಾಪಾರವಾಗಿವೆ. ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ಮಾರಾಟ ಆಯೋಜಿಸಿದ್ದು, ನ.30ರವರೆಗೂ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಪ್ರಸಾರಾಂಗದಲ್ಲಿ ಮಾರಾಟವಾಗುವ ಪುಸ್ತಕಗಳಲ್ಲಿ 1985ಕ್ಕಿಂತ ಮುಂಚೆ ಪ್ರಕಟಗೊಂಡ ಪುಸ್ತಕಗಳಿಗೆ ಶೇ.75, 1985ರಿಂದ 2000ರ ವರೆಗಿನ ಪುಸ್ತಕಗಳಿಗೆ ಶೇ.60, 2000 ದಿಂದೀಚೆಗಿನ ಪುಸ್ತಕಗಳಿಗೆ ಹಾಗೂ ಎಪಿಗ್ರಾಫಿಯಾ ಕರ್ನಾಟಕ, ವಿಶ್ವಕೋಶ ಮುಂತಾದವುಗಳಿಗೆ ಶೇ.50 ಮತ್ತು ನಿಘಂಟುಗಳಿಗೆ ಶೇ.25 ರಿಯಾಯಿತಿಯಲ್ಲಿ ಸಿಗಲಿದೆ.

ಮಾನಸಗಂಗೋತ್ರಿಯಲ್ಲಿರುವ ಮೈವಿವಿ ಪ್ರಸಾರಾಂಗದ ಮುಖ್ಯ ಕಚೇರಿ, ನಗರದ ರಾಮಸ್ವಾಮಿ ವೃತ್ತದ ಮಳಿಗೆಯ ಮಾರಾಟ ಕೇಂದ್ರದಲ್ಲಿ ಈ ಮಾರಾಟ ವ್ಯವಸ್ಥೆ ಇರುತ್ತದೆ. ಈ ಅವಕಾಶವನ್ನು ವಿದ್ಯಾರ್ಥಿಗಳು, ವಿದ್ವಾಂಸರು, ಪುಸ್ತಕ ಮಾರಾಟಗಾರರು, ಜನಸಾಮಾನ್ಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.