

ಮೈಸೂರು: ಅಂಕಕ್ಕಾಗಿ ಸಂಸ್ಕೃತ ಭಾಷೆ ಕಲಿಯಬೇಡಿ. ಭಾರತೀಯ ಮೌಲ್ಯಗಳು ಅಡಕವಾಗಿರುವ ಈ ಭಾಷೆಯನ್ನು ಜೀವನದ ಉದ್ಧಾರಕ್ಕಾಗಿ ಕಲಿಯಬೇಕು ಎಂದು ಅವಧೂತ ದತ್ತಪೀಠದ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತ ಭಾರತೀಯ ಸಂಸ್ಕೃತಿಯ ಹಿರಿಮೆಯ ಭಾಷೆ. ಇದು ಶಾಲಾ-ಕಾಲೇಜುಗಳಲ್ಲೂ ಕಲಿಸಲಾಗುತ್ತದೆ. ಆದರೆ, ಇದು ಬರೀ ಅಂಕಕ್ಕಾಗಿ ಮಾತ್ರ. ಇದು ಸರಿಯಲ್ಲ. ಇದು ಜೀವನ ಉದ್ಧಾರ ಮಾಡುವ ಭಾಷೆ. ಪ್ರತಿಯೊಬ್ಬರೂ ಈ ಸಂಸ್ಕೃತ ಭಾಷೆಯನ್ನು ಕಳಿಯುವ ಮೂಲಕ ಇದನ್ನು ಉಳಿಸಬೇಕಿದೆ ಎಂದರು.
ಸಂಸ್ಕೃತವು ಭಾರತದ ಅತ್ಯಂತ ಪ್ರಾಚೀನ ಮತ್ತು ಸಮೃದ್ಧ ಭಾಷೆಗಳಲ್ಲಿ ಒಂದಾಗಿದೆ. ಭಾರತೀಯ ಸಂಸ್ಕೃತಿ, ಧರ್ಮ, ತತ್ವಶಾಸ್ತ್ರ, ಸಾಹಿತ್ಯ, ವಿಜ್ಞಾನ ಮತ್ತು ಜ್ಞಾನ ಪರಂಪರೆಯ ಬೆಳವಣಿಗೆಯಲ್ಲಿ ಸಂಸ್ಕೃತ ಭಾಷೆಯ ಕೊಡುಗೆ ಅಪಾರವಾಗಿದೆ.
ಆದ್ದರಿಂದ ಸಂಸ್ಕೃತ ಉಳಿದರೆ ಭಾರತೀಯ ಸಂಸ್ಕೃತಿ ಸಹ ಉಳಿಯಲಿದೆ. ಸಂಸ್ಕೃತ ಕೇವಲ ಒಂದು ಪ್ರಾಚೀನ ಭಾಷೆಯಲ್ಲ. ಅದು ಭಾರತದ ಜ್ಞಾನ, ಸಾಹಿತ್ಯ, ಸಂಸ್ಕೃತಿ ಮತ್ತು ತತ್ವ ಚಿಂತನೆಯ ಪ್ರಮುಖ ವಾಹಕವಾಗಿದೆ. ಆದ್ದರಿಂದ ಸಂಸ್ಕೃತ ಭಾಷೆಯ ಅಧ್ಯಯನ ಮತ್ತು ಸಂರಕ್ಷಣೆ ಮಾಡಬೇಕಿದ್ದು, ನಮ್ಮ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಇದು ಮಹತ್ವದ್ದಾಗಿದೆ ಎಂದು ಹೇಳಿದರು.
ಡಾ.ಗುರುಪಾದ ಕೆ.ಹೆಗಡೆ ಅವರಿಗೆ ಮೈತ್ರಿ ಪುರಸ್ಕಾರ ಪ್ರದಾನ ಮಾಡಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಅಧಿಕ ಅಂಕ ಪಡೆದ 86 ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ದೇಶ ಭಕ್ತಿ ಗೀತೆಗಳು, ಭರತನಾಟ್ಯವನ್ನು ಪ್ರಸ್ತುತ ಪಡಿಸಲಾಯಿತು.
ಕಲಾವಿದ ಡಾ.ಕೆ.ಸುಚೇಂದ್ರ ಪ್ರಸಾದ್, ವಿದ್ವಾಂಸರಾದ ಪ್ರೊ.ಎಚ್.ವಿ.ನಾಗರಾಜರಾವ್, ಡಾ.ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ, ಡಾ.ಭಾನುಪ್ರಕಾಶ್ ಶರ್ಮಾ, ಸುಧರ್ಮಾ ಪತ್ರಿಕೆ ಸಂಪಾದಕಿ ಜಯಲಕ್ಷ್ಮೀ, ಅಭಾಸಾಪ ಪ್ರಮುಖ ಡಾ.ವಿ.ರಂಗನಾಥ, ಮೈತ್ರಿ ಸಂಸ್ಕೃತ, ಸಂಸ್ಕೃತಿ ಪ್ರತಿಷ್ಠಾನದ ಕೆ.ಆರ್.ನಾಗರಾಜ, ವೀಣಾರಾವ್ ಇನ್ನಿತರರಿದ್ದರು.