ವಿಶ್ವ ಜೀರ್ಣಾಂಗ ಆರೋಗ್ಯ ದಿನ

ವಿಶ್ವ ಜೀರ್ಣಾಂಗ ಆರೋಗ್ಯ ದಿನ
ವಿಶ್ವ ಜೀರ್ಣಾಂಗ ಆರೋಗ್ಯ ದಿನ
Published on

ಪ್ರಮುಖ ಮುಖ್ಯಾಂಶಗಳು

  • ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಐಎಸ್‌ಜಿ ಕರ್ನಾಟಕ ಮತ್ತು ಮಣಿಪಾಲ್ ಆಸ್ಪತ್ರೆಯಿಂದ ಜಾಗೃತಿ ಅಭಿಯಾನ
  • ಕ್ಲೈಂಬಥಾನ್' ಹಾಗೂ ಸ್ವಚ್ಛತಾ ಅಭಿಯಾನ ಯಶಸ್ವಿ
ಮೈಸೂರು: ವಿಶ್ವ ಜೀರ್ಣಾಂಗ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ISG) ಕರ್ನಾಟಕ ವಿಭಾಗ, ಮೈಸೂರಿನ ಮಣಿಪಾಲ್ ಹಾಸ್ಪಿಟಲ್ ಸಹಯೋಗದೊಂದಿಗೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಲಾಗಿದ್ದ 'ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ'ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಯಿತು.
ಬೆಳಿಗ್ಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜರುಗಿದ “ಚಾಮುಂಡಿ ಹಿಲ್ಸ್ ಕ್ಲೈಂಬಥಾನ್ ಮತ್ತು ಸ್ವಚ್ಛತಾ ಅಭಿಯಾನ” ಕಾರ್ಯಕ್ರಮದಲ್ಲಿ ವೈದ್ಯರು, ಆರೋಗ್ಯ ವೃತ್ತಿಪರರು, ಫಿಟ್ನೆಸ್ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
“ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೆ ಒಂದು ಸಣ್ಣ ಯತ್ನ, ನಿಮ್ಮ ಉತ್ತಮ ಆರೋಗ್ಯದತ್ತ ಒಂದು ದೊಡ್ಡ ಹೆಜ್ಜೆ.” ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, ಜೀರ್ಣಾಂಗ ಆರೋಗ್ಯದ ಮಹತ್ವ, ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಇದೇ ವೇಳೆ, ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಉದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್ ಕಾರ್ಯದರ್ಶಿ ಡಾ. ಸತೀಶ್ ರಾವ್ ಎ.ಕೆ. ಹಾಗೂ ಅಧ್ಯಕ್ಷ ಡಾ. ಎಚ್. ಪಿ. ನಂದೀಶ್ ಅವರ ನೇತೃತ್ವದಲ್ಲಿ, ಮೈಸೂರು ‘ಗ್ಯಾಸ್ಟ್ರೋ ಕ್ಲಬ್’ ಸಂಚಾಲಕರಾದ ಡಾ. ರಾಮಕೃಷ್ಣ ಅವರ ಸಹಕಾರದೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗಳಾದ (DHO) ಡಾ. ಪಿ.ಸಿ. ಕುಮಾರಸ್ವಾಮಿ ಅವರು, " ಆರೋಗ್ಯಕರ ಜೀರ್ಣಾಂಗ ಮತ್ತು ಸ್ವಚ್ಛ ಪರಿಸರವೇ ನಮ್ಮ ಉತ್ತಮ ಆರೋಗ್ಯದ ಅಡಿಪಾಯ. ಚಾಮುಂಡಿ ಬೆಟ್ಟವನ್ನು ಹತ್ತುವ ಮತ್ತು ಸ್ವಚ್ಛಗೊಳಿಸುವ ಈ ವಿಶಿಷ್ಟ 'ಕ್ಲೈಂಬಥಾನ್' ಮೂಲಕ ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನಶೈಲಿ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ISG) ಕರ್ನಾಟಕ ವಿಭಾಗದ ಪ್ರಯತ್ನ ನಿಜಕ್ಕೂ ಶ್ಲಾಘನೀಯ" ಎಂದು ತಿಳಿಸಿದರು.
ಮಣಿಪಾಲ್ ಆಸ್ಪತ್ರೆಯ ಡಾ. ಸತೀಶ್ ರಾವ್ ಎ.ಕೆ. ಸೀನಿಯರ್ ಕನ್ಸಲ್ಟೆಂಟ್ - ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಕಾರ್ಯದರ್ಶಿ, ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್ ಅವರು ಮಾತನಾಡಿ, "ನಮ್ಮ ಮಾನವ ದೇಹದಲ್ಲಿ ಹೃದಯದಷ್ಟೇ ನಮ್ಮ ಜೀರ್ಣಾಂಗ ವ್ಯವಸ್ಥೆಯೂ ಸಹ ಅತ್ಯಂತ ಪ್ರಮುಖವಾದುದಾಗಿದೆ. ಈ ವರ್ಷದ ವಿಶ್ವ ಜೀರ್ಣಾಂಗ ಆರೋಗ್ಯ ದಿನದ ಅಂಗವಾಗಿ 'ದೀರ್ಘಕಾಲದ ಭೇದಿ: ರೋಗದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ' (Chronic Diarrhea: Don't Flush the Signs Away) ಎಂಬ ಪರಿಕಲ್ಪನೆಯನ್ನು ನೀಡಲಾಗಿದ್ದು, ಸಾರ್ವಜನಿಕರು ಹೊಟ್ಟೆಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಲಕ್ಷಣಗಳನ್ನು ಸಾಮಾನ್ಯ ಎಂದು ಕಡೆಗಣಿಸದೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ" ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ. ಎಮ್. ಸಿ. ಎ.ಸಿ ಹಾಗೂ ಮಣಿಪಾಲ್ ಆಸ್ಪತ್ರೆ, ಮೈಸೂರಿನ ಕ್ಲಸ್ಟರ್ ನಿರ್ದೇಶಕರಾದ ಪ್ರಮೋದ್ ಕುಂದರ್ ಅವರು ಮಾತನಾಡಿ, "ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ISG) ಕರ್ನಾಟಕ ವಿಭಾಗವು ಆಯೋಜಿಸಿರುವ ಈ ಅಭಿಯಾನವು ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನು ಉತ್ತೇಜಿಸುವ ನಮ್ಮ ಬದ್ಧತೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೈಸೂರಿನ ಮಣಿಪಾಲ್ ಆಸ್ಪತ್ರೆ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, “ಉತ್ತಮ ಆರೋಗ್ಯವು ಉತ್ತಮ ಜೀವನಶೈಲಿಯಿಂದ ಆರಂಭವಾಗುತ್ತದೆ. ಈ ಕ್ಲೈಂಬಥಾನ್ ಮೂಲಕ ಕರುಳಿನ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಜನರನ್ನು ಸಕ್ರಿಯ ಜೀವನಶೈಲಿಯತ್ತ ಪ್ರೇರೇಪಿಸುವುದು ನಮ್ಮ ಉದ್ದೇಶ. ಇಂದು ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಆರೋಗ್ಯಕರ ಭವಿಷ್ಯದತ್ತ ಸಾಗುವ ಹೆಜ್ಜೆಯಾಗಿದೆ." ಎಂದು ಹೇಳಿದರು.
ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಈ ಜಾಗೃತಿ ಅಭಿಯಾನಕ್ಕೆ ಪ್ರಮುಖ ಸಹಕಾರ ನೀಡುವ ಮೂಲಕ, ಸಮಾಜದ ಆರೋಗ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಬಗೆಗಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿತು. 'ಅರ್ನಾಲ್ಡ್ ಫಿಟ್ನೆಸ್' ಸಂಸ್ಥೆಯು ಫಿಟ್ನೆಸ್ ಪಾಲುದಾರರಾಗಿ ಕೈಜೋಡಿಸಿತ್ತು.
ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ಡಾ. ನಿಶ್ಚಯ್ ಆರ್, ಕನ್ಸಲ್ಟೆಂಟ್ – ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯ ವೈದ್ಯರು, ಆರೋಗ್ಯ ವೃತ್ತಿಪರರು, ಫಿಟ್ನೆಸ್ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಜಾಗೃತಿ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net