ಮೈಸೂರು: ಶೇ.33ರಷ್ಟು ಮಹಿಳಾ ಮೀಸಲಾತಿ ದೇಶದಲ್ಲಿ ಜಾರಿಯಾದರೆ ಭವಿಷ್ಯದಲ್ಲಿ ಮಹಿಳಾ ಆಡಳಿತ ನಿಶ್ಚಿತ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಲೇಡೀಸ್ ಅಸೋಸಿಯೇಷನ್‌ನ ಬೆಳ್ಳಿಹಬ್ಬದ ಮಹೋತ್ಸವ, ಸ್ತ್ರೀ ಸಬಲೀಕರಣಕ್ಕಾಗಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.
ಶೋಷಣೆ, ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳು ಆಳ್ವಿಕೆ ಮಾಡುವ ವರ್ಗವಾಗಿ ಬದಲಾಗುತ್ತಿವೆ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ, ರಾಜಕೀಯ ಹಕ್ಕು ನೀಡಿದೆ ಶೋಷಿಸಲಾಗಿತ್ತು. ಆದರೀಗ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದು, ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬಂದರೆ ಮಹಿಳೆಯರು ಆಡಳಿತ ನಡೆಸಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಮುಂದಿನ ಯುಗ ಮಹಿಳೆಯರದ್ದಾಗಿದೆ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಪ್ಪು ಜನರು, ಬಿಳಿ ಜನರನ್ನು ಸೋಲಿಸಿ ಗೋಲು ಬಾರಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಪರಿವರ್ತನೆ ನಿಶ್ಚಿತವಾಗಿದ್ದು, ಶೋಷಿತರು ಭವಿಷ್ಯದಲ್ಲಿ ಅಧಿಕಾರ ನಡೆಸಲಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.
ಮಹಿಳಾ ಸಬಲೀಕರಣದ ಅಗತ್ಯವಾಗಿದ್ದು, ಶತಮಾನಗಳ ಕಾಲ ಮಹಿಳೆಯರನ್ನು ಸಮಾಜದಲ್ಲಿ ಬೇರೂರಿದ್ದ ಅನಿಷ್ಠ ಪದ್ಧತಿಗಳು ಶೋಷಿಸಿವೆ. ತಾರತಮ್ಯ ನಿವಾರಣೆಗೆ ಸಂವಿಧಾನದಲ್ಲಿ ಮಾರ್ಗೋಪಾಯ ಅನುಸರಿಸಬೇಕಾಗಿದೆ ಎಂದರು
ಈ ಹಿಂದೆ ಮಹಿಳೆಗೆ ಶಿಕ್ಷಣ ವಂಚಿತರನ್ನಾಗಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ಮಹಿಳೆಯರಿಗೆ, ವಿಧವೆಯರಿಗೆ ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ ಶಾಲೆ ಸ್ಥಾಪಿಸಿದರು. ಇದನ್ನು ಗಮನಿಸಿದ ಬ್ರಿಟಿಷರು ದಲಿತರು, ಮಹಿಳೆಯರು ಹಾಗೂ ಶೂದ್ರರಿಗೆ ಸಾರ್ವತ್ರಿಕ ಶಿಕ್ಷಣ ನೀಡಲು ಮುಂದಾದರು. ಬಳಿಕವೇ ಸ್ತ್ರೀಯರಿಗೆ ಶಿಕ್ಷಣ ಸಿಕ್ಕಿತ್ತು ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳೆಲ್ಲ ಶೋಷಣೆಯ ಮತ್ತೊಂದು ಮುಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ವರದಕ್ಷಿಣೆ, ಭ್ರೂಣ ಹತ್ಯೆ, ಮರ್ಯಾದೆ ಹತ್ಯೆಯಂತಹ ಕೃತ್ಯ ಮಹಿಳೆಯರನ್ನು ಇನ್ನಷ್ಟು ದಮನಿಸುತ್ತಿವೆ ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಶೇ.33ರಷ್ಟು ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬದ್ಧವಾಗಿದೆ. ಇದು ಅನುಷ್ಠಾನಕ್ಕೆ ಬಂದರೆ ವಿಧಾನಸಭೆಗೆ ಕನಿಷ್ಠ 80 ಮಹಿಳಾ ಶಾಸಕರ ಪ್ರವೇಶವಾಗಲಿದ್ದು, ಪ್ರಸ್ತುತ 224ರಲ್ಲಿ 12 ಮಹಿಳಾ ಶಾಸಕರಿದ್ದಾರೆ. ಮಹಿಳೆಯರಿಗೆ ತಾಳ್ಮೆ, ಬುದ್ಧಿವಂತಿಕೆ ಹೆಚ್ಚಾಗಿರುವುದರಿಂದ ಸಮರ್ಥವಾಗಿ ಆಡಳಿತ ನೀಡುತ್ತಾರೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ 2 ಸಾವಿರ ಹಣದಿಂದ ಬಹಳಷ್ಟು ಮಹಿಳೆಯರು ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇಂತಹ ಕೌಶಲ ಹೊಂದಿರುವ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದರು.
ಮಾಜಿ ಶಾಸಕಿ ಗೀತಾ ಮಹದೇವ ಪ್ರಸಾದ್, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ, ವಕೀಲೆ ಸುಮನಾ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಉಪಾಧ್ಯಕ್ಷೆ ಪವಿತ್ರಾ ಮಲ್ಲಿಕಾರ್ಜುನ್, ಮುಖಂಡರಾದ ಪೂರ್ಣಿಮಾ ರಮೇಶ್, ಪುಷ್ಟಾ ನಾಗರಾಜ್, ವಿದ್ಯಾ ಶಿವಕುಮಾರ್, ಚಂದ್ರಕಲಾ ಶಿವರಾಜ್ ಇನ್ನಿತರರು ಪಾಲ್ಗೊಂಡಿದ್ದರು.
ಗಾಯಕ ನಾಗೇಶ್ ಕಂದೇಗಾಲ ಮತ್ತು ತಂಡದಿಂದ ಗೀತಗಾಯನ ನಡೆಯಿತು. ಜತೆಗೆ, ರಂಗೋಲಿ ಸ್ಫರ್ಧೆ, ಚಿತ್ರಕಲಾ ಸ್ಪರ್ಧೆ, ಬೆಂಕಿ ರಹಿತ ಅಡುಗೆ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಮಧುಮಗಳ ಸ್ಪರ್ಧೆ, ಗೀತಗಾಯನ ಸ್ಪರ್ಧೆ, ಲಕ್ಕಿ ಲೇಡಿ ಸ್ಪರ್ಧೆಗಳು ಗಮನ ಸೆಳೆದವು.