ಸ್ತ್ರೀಯರು ಪುರುಷರಷ್ಟೇ ಸರಿಸಮಾನರು

ಪಿರಿಯಾಪಟ್ಟಣದ ಶ್ರೀ ದೇವರಾಜ ಅರಸು ಕಲಾ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಉದ್ಘಾಟಿಸಿದರು. ನ್ಯಾಯಾಧೀಶರಾದ ಎಂ.ಆರ್.ಯೋಗೇಶ್, ಶ್ವೇತಾ ಇತರರು ಇದ್ದರು.
ಪಿರಿಯಾಪಟ್ಟಣದ ಶ್ರೀ ದೇವರಾಜ ಅರಸು ಕಲಾ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಉದ್ಘಾಟಿಸಿದರು. ನ್ಯಾಯಾಧೀಶರಾದ ಎಂ.ಆರ್.ಯೋಗೇಶ್, ಶ್ವೇತಾ ಇತರರು ಇದ್ದರು.
Published on
ಪಿರಿಯಾಪಟ್ಟಣ: ದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಪೈಪೋಟಿ ನೀಡುತ್ತಿರುವುದು ಸಮಾಜದ ಪರಿವರ್ತನೆಯ ಒಂದು ಭಾಗವಾಗಿದೆ ಎಂದು ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ದೇವರಾಜ ಅರಸು ಕಲಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಚೈತನ್ಯ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಗೌರವಿಸುವ ಹಾಗೂ ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸುವ ಜಾಗತಿಕ ದಿನ ಇದಾಗಿದೆ. ಮಹಿಳೆಯರ ಸಾಧನೆ ಬಗ್ಗೆ ವಿಶ್ಲೇಷಿಸುವ ಜತೆಗೆ ಲಿಂಗ ಸಮಾನತೆ ಪ್ರತಿಪಾದಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳು ಹೆಚ್ಚು ಮಹತ್ವ ಹೊಂದಿದ್ದು, ವಿಶ್ವದಾದ್ಯಂತ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ವೇದಿಕೆ ಬಳಕೆಯಾಗುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ನಾರಿ ಶಕ್ತಿ ಎನ್ನುವುದು ಕೇವಲ ಮಾತಲ್ಲ, ಇದು ಜಗತ್ತಿನ ಸತ್ಯ. ಹೆಣ್ಣುಮಗು ಹುಟ್ಟಿದಾಗಿನಿಂದ ತಾಯಿ, ಸಹೋದರಿ, ಪತ್ನಿ, ಮಗಳು ಸೇರಿದಂತೆ ನಾನಾ ರೂಪದಲ್ಲಿ ಕುಟುಂಬ ಮತ್ತು ಸಮಾಜವನ್ನು ಮುನ್ನಡೆಸುತ್ತಾಳೆ ಎಂದರು.
ಮಹಿಳಾ ದಿನಾಚರಣೆಯು ಕೇವಲ ಹೆಣ್ಣನ್ನು ಹೊಗಳುವ ದಿನವಲ್ಲ, ಬದಲಾಗಿ ಮಹಿಳೆಯರ ಹಕ್ಕುಗಳು, ಅವರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದಿನವಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ತಾಯಿ, ಸಹೋದರಿ, ಪತ್ನಿ ಮತ್ತು ಮಹಿಳಾ ಸಹೋದ್ಯೋಗಿಗಳಿಗೆ ನಾವು ನೀಡುವ ಗೌರವವೇ ನಿಜವಾದ ಮಹಿಳಾ ದಿನಾಚರಣೆ ಆಗಿದೆ. ನಾವು ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಲಿಂಗ ಸಮಾನತೆ ಕೇವಲ ಕಾನೂನಿನಲ್ಲಿ ಇರಬಾರದು. ಅದು ನಮ್ಮ ಮನಸ್ಥಿತಿಯಲ್ಲಿ ಇರಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಖಜಾಂಚಿ ಹರೀಶ್, ಪ್ಯಾನಲ್ ವಕೀಲ ಎನ್.ಸುಭಾಷ್, ಚೈತನ್ಯ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥೆ ಜೈನ್ ಮ್ಯಾತ್ಯು, ಸಿಸ್ಟರ್‌ಗಳಾದ ದಿಶಾ, ರೋಶಮ್ಮ, ಲೀಲಾ, ಸುಮಾ, ಜೋಬಿ, ಜಯ, ಪುಷ್ಪಾ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಥಾಮಸ್, ಸಿಡಬ್ಲ್ಯುಸಿ ಸದಸ್ಯರಾದ ಕೋಟೆ ಮಹದೇವ್, ಬಿಸಿಎಂ ಅಧಿಕಾರಿ ಕೃಷ್ಣೇಗೌಡ, ಶೀಲರಾಣಿ, ಸುಮಾ, ಮೇಘ, ಮಂಜುಳಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net