ಶಾಲೆ ವಿಲೀನಕ್ಕೆ ಗ್ರಾಮಸ್ಥರ ಆಕ್ರೋಶ

ಎಚ್.ಡಿ.ಕೋಟೆ ತಾಲೂಕು ವಡ್ಡರಪಾಳ್ಯ ಗ್ರಾಮಸ್ಥರು ಗ್ರಾಮದ ಶಾಲೆಯನ್ನು ಬೇರೆ ಶಾಲೆಗೆ ವಿಲೀನಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಎಚ್.ಡಿ.ಕೋಟೆ ತಾಲೂಕು ವಡ್ಡರಪಾಳ್ಯ ಗ್ರಾಮಸ್ಥರು ಗ್ರಾಮದ ಶಾಲೆಯನ್ನು ಬೇರೆ ಶಾಲೆಗೆ ವಿಲೀನಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
Published on
ಎಚ್.ಡಿ.ಕೋಟೆ: ನಮ್ಮೂರ ಶಾಲೆಯನ್ನು ಬೇರೆ ಶಾಲೆಯೊಂದಿಗೆ ವಿಲೀನಗೊಳಿಸಬಾರದು ಎಂದು ಆಗ್ರಹಿಸಿ ತಾಲೂಕಿನ ವಡ್ಡರಪಾಳ್ಯ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಶಾಲಾ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸಲು ಬಿಡುವುದಿಲ್ಲ. ಒಂದು ವೇಳೆ ವಿಲೀನಗೊಳಿಸಿದರೆ ನಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸುವ ಶಾಲೆಗೆ ಕಳುಹಿಸದೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯೆ ಸುಮಾ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ವಡ್ಡರಪಾಳ್ಯ ಗ್ರಾಮದ ಸರ್ಕಾರಿ ಶಾಲೆಯನ್ನು ಹೊಮ್ಮರಗಹಳ್ಳಿ ಶಾಲೆಗೆ ವಿಲೀನಗೊಳಿಸಲು ಸರ್ಕಾರ ಆದೇಶಿಸಿದೆ. ಹೊಮ್ಮರಗಹಳ್ಳಿ ಶಾಲೆ ಕೋಟೆ ಮುಖ್ಯ ರಸ್ತೆಯಲ್ಲಿ ಇದೆ. ಈಗಾಗಲೇ ಎಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಹೀಗಿರುವಾಗ ಚಿಕ್ಕ ಮಕ್ಕಳನ್ನು ಹೊಮ್ಮರಗಹಳ್ಳಿ ಶಾಲೆಗೆ ಕಳುಹಿಸಲು ಪಾಲಕರಿಗೆ ಹೇಗೆ ಧೈರ್ಯ ಬರುತ್ತದೆ? ವಡ್ಡರಪಾಳ್ಯದಲ್ಲಿ ಬಹುಪಾಲು ಜನ ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರು. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಬರುತ್ತಾರೆ. ಶಿಕ್ಷಣಕ್ಕಾಗಿ ಮಕ್ಕಳ ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ ಬರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುತ್ತಾರೆ. ಒಂದು ವೇಳೆ ಗ್ರಾಮದ ಶಾಲೆ ಮುಚ್ಚಿದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈಗಾಗಲೇ ವಡ್ಡರಪಾಳ್ಯದ 6 ಮತ್ತು 7ನೇ ತರಗತಿ ಮಕ್ಕಳು ಹೇರ್ಗಳ್ಳಿ ಶಾಲೆಗೆ ನಡೆದುಕೊಂಡು ಹೋಗಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಬಸ್ ವ್ಯವಸ್ಥೆ ಇಲ್ಲ. ಒಟ್ಟಾರೆ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಬಡ ಮಕ್ಕಳಿಂದ ಶಿಕ್ಷಣ ಕಸಿಯಲು ಮುಂದಾಗಿದೆ ದೂರಿದರು.
ಪಾಲಕರ ಒಪ್ಪಿಗೆ ಪಡೆದು ಕೆಪಿಎಸ್ ಶಾಲೆಗೆ ದಾಖಲಾತಿ ಮಾಡುತ್ತೇವೆ ಎಂದು ಹೇಳಿದ್ದ ಸರ್ಕಾರ, ವಿರುದ್ಧವಾಗಿ ಹಾಸನ ಜಿಲ್ಲೆಯ ಹಲವು ಶಾಲೆಗಳಲ್ಲಿ ಪಾಲಕರ ಒಪ್ಪಿಗೆ ಪಡೆಯದೆ ಮಕ್ಕಳನ್ನು ಕೆಪಿಎಸ್ ಶಾಲೆಗೆ ಸೇರಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಇದು ಸರ್ಕಾರದ ಅಪ್ರಜಾತಾಂತ್ರಿಕ ಧೋರಣೆ ತೋರಿಸುತ್ತದೆ. ಜನಗಳು ಒಗ್ಗಟ್ಟಾಗಿ ನಮ್ಮೂರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರತಿರೋಧ ಒಡ್ಡಬೇಕು ಎಂದು ತಿಳಿಸಿದರು.
ವಡ್ಡರಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಸಹನಾ ಮಾತನಾಡಿ, ನಮ್ಮೂರ ಸರ್ಕಾರಿ ಶಾಲೆ ಮುಚ್ಚಿದರೆ ನಾವು ಶಾಲೆಗೆ ಹೋಗುವುದನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ತಿಳಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಸ್ವಾತಿ, ಹೇಮಾ, ವಡ್ಡರಪಾಳ್ಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ ಶ್ರೀನಿವಾಸ್, ಭಾಗ್ಯಮ್ಮ, ಸಾವಿತ್ರಮ್ಮ , ನಿಂಗರಾಜು, ಆನಂದ, ಮಹೇಶ್ ಮುಂತಾದವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net